

ಕಾರವಾರ: ಭೂ ಕುಸಿತದಿಂದ ರಸ್ತೆ ಸಂಪರ್ಕ ಕಳೆದುಕೊಂಡಿದ್ದ ಶಿರಸಿ ತಾಲೂಕಿನ ಕೆಳಗಿನಕೇರಿಯ ಕುಟುಂಬಗಳಿಗೆ ಕೊನೆಗೂ ರಸ್ತೆ ನಿರ್ಮಾಣದ ಭರವಸೆ ಸಿಕ್ಕಿದೆ. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಈ ರಸ್ತೆ ದುರಸ್ತಿಗೆ ವಿಪತ್ತು ಪರಿಹಾರ ನಿಧಿಯಲ್ಲಿ ಅನುದಾನ ಬಿಡುಗಡೆ ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.
2021 ಹಾಗೂ 2023 ರಲ್ಲಿ ಸುರಿದ ಭಾರಿ ಮಳೆಯಿಂದ ಶಿರಸಿ ತಾಲೂಕಿನ ಮತ್ತಿಘಟ್ಟ ಕೆಳಗಿನಕೇರಿಯಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಮನೆಯ ಸಮೀಪ ವಾಹನ ಸಂಪರ್ಕದಿಂದ ವಂಚಿತರಾಗಿದ್ದರು. ಮಳೆಗಾಲ ಬಂದರೆ ರಸ್ತೆ ಇನ್ನಷ್ಟು ಕುಸಿದು ಗ್ರಾಮ ಸಂಪೂರ್ಣ ಬಾಹ್ಯ ಸಂಪರ್ಕದಿಂದ ವಂಚಿತವಾಗುವ ಸಾಧ್ಯತೆ ಇತ್ತು.
ಈ ಕುರಿತು ಗ್ರಾಮಸ್ಥರು ಸ್ಥಳೀಯ ಹಂತದಲ್ಲಿ ಹಲವು ಬಾರಿ ಮನವಿ ಕೊಟ್ಟು ಸೋತಿದ್ದರು. ನಂತರ ತಿಂಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಸಾಂಕೇತಿಕ ಪ್ರತಿಭನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನೂ ನೀಡಿದ್ದರು. ರಸ್ತೆ ಮಾಡಿಕೊಡಲು ಜಿಲ್ಲಾಧಿಕಾರಿ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಆದೇಶ ನೀಡಿದ್ದರು. ಆದರೆ,ಹಣ ಇಲ್ಲದ ಕಾರಣ ಇಂಜಿನಿಯರಿಂಗ್ ವಿಭಾಗ ಕಾಮಗಾರಿ ಕೈಗೊಂಡಿರಲಿಲ್ಲ.
ಇದರಿಂದ ಗ್ರಾಮಸ್ಥರು ಸೋಮವಾರ ಕಾರವಾರ ಜಿಲ್ಲಾಽಕಾರಿ ಕಚೇರಿಗೆ ಆಗಮಿಸಿ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹದ ನಡೆಸಲು ಮುಂದಾದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಗ್ರಾಮಸ್ಥರು, ಹಾಗೂ ಪಿಆರ್‌ಇಡಿ ಇಂಜಿನಿಯರ್ ಅವರನ್ನು ಕರೆಸಿ ಮಾತುಕತೆ ನಡೆಸಿ, ಅನುದಾನ ಮಂಜೂರು ಮಾಡಿದ್ದಾರೆ. ಈ ಮಧ್ಯೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಜಿಲ್ಲಾಽಕಾರಿ ಅವರ ಜತೆ ಮಾತನಾಡಿ, ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದರು.