ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಬೇಡಿ

2-SIRSI-1 RAIN MAPAK
Published on

ಶಿರಸಿ: ಜಿಲ್ಲೆಯಲ್ಲಿ ಮಳೆ ಮಾಪನ ಯಂತ್ರಗಳ ದುರಸ್ತಿ ಇನ್ನೂ ಆಗಿಲ್ಲ. ಮಳೆ ಮಾಪನ ಯಂತ್ರಗಳ ನಿರ್ವಹಣೆ ಮಾಡಬೇಕಿದ್ದ ಕೆಎಸ್​ಎನ್​ಡಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ತಕ್ಷಣವೇ ಈ ಯಂತ್ರಗಳ ರಿಪೇರಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಎಚ್ಚರಿಸಿದರು. ನಗರದ ಮಿನಿ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಶಿರಸಿ ಮತ್ತು ಸಿದ್ದಾಪುರ ತಾಲೂಕಿನ ಸ್ವಯಂ ಚಾಲಿತ ಹವಾಮಾನ ಕೇಂದ್ರ ಮತ್ತು ಮಳೆ ಮಾಪನ ಯಂತ್ರಗಳ ಕಾರ್ಯನಿರ್ವಹಣೆ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಸದ್ಯ ಸಂಕಷ್ಟದಲ್ಲಿದ್ದಾರೆ, ಅಡಕೆ, ಭತ್ತಕ್ಕೆ ವಿವಿಧ ರೋಗಗಳ ಕಾಟದಿಂದಾಗಿ ಬೆಳೆಯ ಪ್ರಮಾಣವೇ ಕಡಿಮೆ ಆಗುತ್ತಿದೆ. ಇರುವ ಕಡಿಮೆ ಆದಾಯದಲ್ಲಿ ಬೆಳೆ ವಿಮೆ ಕಂತು ತುಂಬಿದ್ದರೂ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಬೆಳೆ ವಿಮೆ ಪಡೆಯಲು ತೊಂದರೆ ಆಗಿದೆ. ಈ ವರ್ಷ ಅಂತೂ ಇಂತೂ ಹಣ ಬಿಡುಗಡೆ ಆಗಿದ್ದು, ಮುಂದಿನ ವರ್ಷ ಮತ್ತೆ ಇದೇ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ರೈತರ ಬಾಳಿನಲ್ಲಿ ಅಧಿಕಾರಿಗಳು ಚಲ್ಲಾಟವಾಡುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಕೆಎಸ್​ಎನ್​ಡಿಎಂಸಿ ಅಧಿಕಾರಿಗಳೇ ಬೆಂಗಳೂರಿನ ಹವಾನಿಯಂತ್ರಿತ ಕಚೇರಿಯಲ್ಲಿ ಸುಖವಾಗಿ ಕುಳಿತಿದ್ದಾರೆ. ಇಲ್ಲಿ ಮಳೆ ಮಾಪನ ಯಂತ್ರಗಳ ನಿರ್ವಹಣೆಗೆ ಇಡೀ ಜಿಲ್ಲೆಯಲ್ಲಿ ಒಬ್ಬ ನೌಕರ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆ ಅಬ್ಬರದಲ್ಲಿ ಯಂತ್ರಗಳು ಹಾಳಾದಾಗ ಒಬ್ಬ ವ್ಯಕ್ತಿ ಇಷ್ಟು ದೊಡ್ಡ ಜಿಲ್ಲೆಯಲ್ಲಿ ಹೇಗೆ ಓಡಾಡಿ ಸರಿಪಡಿಸಲು ಸಾಧ್ಯ? ಕೆಎಸ್​ಎನ್​ಡಿಎಂಸಿ ಅಧಿಕಾರಿಗಳಿಗೆ ಕನಿಷ್ಟ ಸೌಜನ್ಯ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಳೆ ಮಾಪನ ವ್ಯತ್ಯಾಸದಿಂದಾಗಿ ಇಷ್ಟೆಲ್ಲ ಅವಾಂತರಗಳಾಗಿವೆ. ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ಕೆಎಸ್​ಎನ್​ಡಿಎಂಸಿ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ. ಯಾವ ಮಳೆ ಮಾಪನ ಯಂತ್ರ ಯಾವ ಸ್ಥಿತಿಯಲ್ಲಿದೆ ಎಂಬುದರ ಕನಿಷ್ಟ ಸ್ಥಿತಿಗತಿಯ ಪರಿಶೀಲನೆ ನಡೆಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಕುರಿತಂತೆ ಕೆಎಸ್​ಎನ್​ಡಿಎಂಸಿ ಅಧಿಕಾರಿ ರಮೇಶ ದಿಕ್ಪಾಲ್ ಸ್ಪಷ್ಟನೆ ನೀಡಿ, ಮಳೆ ಮಾಪನ ಕೇಂದ್ರಗಳ ನಿರ್ವಹಣೆಯನ್ನು 5 ವರ್ಷಗಳ ಅವಧಿಗೆ ಟೆಂಡರ್ ಮೂಲಕ ನೀಡಲಾಗುತ್ತಿದೆ. ಈ ಹಿಂದೆ ಟೆಂಡರ್ ಪಡೆದಿದ್ದವರ ಅವಧಿ ಮುಕ್ತಾಯವಾದ ಕಾರಣ ಹೊಸಬರಿಗೆ ಇನ್ನೂ ಟೆಂಡರ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ವ್ಯತ್ಯಯವಾಗಿದೆ ಎಂದರು. ಆಗ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಲೆನಾಡಿನಲ್ಲಿ ನಾಲ್ಕು ತಿಂಗಳ ಕಾಲ ಮಳೆಯಾಗುತ್ತದೆ. ಈ ಮಳೆ ಮಾಪನ ಯಂತ್ರಗಳು ಸೋಲಾರ್ ಆಧರಿಸಿವೆ. ಆದರೆ, ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಸಿಲು ಬೀಳದೇ ಇರುವುದರಿಂದಾಗಿ ಸೋಲಾರ್ ವಿದ್ಯುತ್ ಲಭಿಸದೇ ಮಳೆ ಮಾಪನ ಯಂತ್ರ ಕಾರ್ಯ ನಿರ್ವಹಿಸುವುದಿಲ್ಲ. ಈ ವೇಳೆ ವಿದ್ಯುತ್ ವ್ಯವಸ್ಥೆ ಬಗ್ಗೆ ಯೋಚಿಸಬೇಕು ಎಂದು ಸೂಚಿಸಿದರು. ತಾಲೂಕಿನಲ್ಲಿ ಪ್ರತಿ ದಿನ ಎಷ್ಟು ಮಳೆಯಾಗುತ್ತಿದೆ ಎಂಬ ಮಾಹಿತಿಯನ್ನೂ ಕೆಎಸ್​ಎನ್​ಡಿಎಂಸಿ ಅಧಿಕಾರಿಗಳು ಸಾರ್ವಜನಿಕರಿಗೆ ನೀಡುತ್ತಿಲ್ಲ. ಮುಂದಿನ ನಾಲ್ಕಾರು ದಿನಗಳಲ್ಲಿ ಮಳೆ ಎಷ್ಟಾಗಲಿದೆ ಎಂಬ ಮಾಹಿತಿ ರೈತರಿಗೆ, ಸಾರ್ವಜನಿಕರಿಗೆ ದೊರೆತರೆ ಕೃಷಿ ಚಟುವಟಿಕೆಗೆ ಪೂರಕವಾಗಲಿದೆ. ಶಿರಸಿ-ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕಿನಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದರೂ ಅದನ್ನು ಸರಿಯಾಗಿ ದಾಖಲಿಸಿದ್ದರೆ ಸರ್ಕಾರದಿಂದ ಪರಿಹಾರ ಮಂಜೂರಿಗೂ ತೊಂದರೆ ಆಗುತ್ತದೆ. ಆಯಾ ದಿನದ ಮಳೆ ಮಾಹಿತಿಯನ್ನು ತಹಸೀಲ್ದಾರ್ ಕಾರ್ಯಾಲಯಕ್ಕೆ ಒದಗಿಸುವ ವ್ಯವಸ್ಥೆಯನ್ನು ಕೆಎಸ್​ಎನ್​ಡಿಎಂಸಿ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.

ಕಷ್ಟದ ಪರಿಸ್ಥಿತಿ ಎದುರಿಸಿದರೂ ಜಿಲ್ಲೆಯ 40 ಸಾವಿರ ರೈತರು ಬೆಳೆ ವಿಮೆಯ ಕಂತು ತುಂಬುತ್ತಿದ್ದಾರೆ. ಮಳೆಯ ದಾಖಲೀಕರಣವೇ ಸರಿಯಾಗದಿದ್ದರೆ ವಿಮಾ ಕಂಪನಿ ಪರಿಹಾರ ವಿತರಣೆಗೆ ಹಿಂದೇಟು ಹಾಕುತ್ತದೆ. ಗ್ರಾಮ ಪಂಚಾಯಿತಿಗಳು ಕೆಎಸ್​ಎನ್​ಡಿಎಂಸಿಗೆ ಸತತವಾಗಿ ಅರ್ಜಿ ಸಲ್ಲಿಸಿದರೂ ಉತ್ತರಿಸುವ ಸೌಜನ್ಯ ಈ ಇಲಾಖೆ ಅಧಿಕಾರಿಗಳಿಗಿಲ್ಲವಾಗಿದೆ. | ಭೀಮಣ್ಣ ನಾಯ್ಕ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net