ಸಮಾಜದ ಏಳಿಗೆಯಲ್ಲಿ ಶಿಕ್ಷಣದ ಪಾತ್ರ ಪ್ರಮುಖ

1-SIRSI BHEEMANANA
Published on

ಶಿರಸಿ: ತಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ಇನ್ನುಳಿದ ಸಮಾಜವನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅವರು ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನುಲಿಯ ಚಂದಯ್ಯನವರ 916ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರಗತಿಗೆ ಶಿಕ್ಷಣದ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಯುವ ಜನತೆಗೆ ಶಿಕ್ಷಣದ ಜತೆ ಸಂಸ್ಕಾರ ನೀಡಬೇಕಾದ ಅವಶ್ಯಕತೆಯಿದೆ. ಕೊರಮ, ಕೊರಚ, ಕೊರವರ ಸಮುದಾಯಗಳ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ ಎಂದರು.
ಹಾವೇರಿ ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಶೇಖರ ಭಜಂತ್ರಿ ನುಲಿಯ ಚಂದಯ್ಯನವರ ಜೀವನ ಆದರ್ಶಗಳ ಕುರಿತು ಉಪನ್ಯಾಸ ನೀಡಿದರು.
ಸಹಾಯಕ ಆಯುಕ್ತ ಆರ್. ದೇವರಾಜ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ ಇತರರು ಇದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಚಂದೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಭಜಂತ್ರಿ ನಿರೂಪಿಸಿದರು. ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net