

ಶಿರಸಿ: ಶಿರಸಿ ನಗರಸಭೆ 2024-25ನೇ ಸಾಲಿಗೆ ಬಜೆಟ್ ಸಿದ್ಧತೆ ನಡೆಸಿದ್ದು, ಒಟ್ಟೂ 11.12 ಕೋಟಿ ರೂ. ಆದಾಯ ನಿರೀಕ್ಷಿಸಿದೆ. ನಗರದಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯಿಂದಲೇ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ಶುಕ್ರವಾರ ನಗರಸಭೆಯಲ್ಲಿ ಬಜೆಟ್ ಪೂರ್ವ ಸಭೆಯಲ್ಲಿ ವಿಷಯ ತಿಳಿಸಿದ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಆಸ್ತಿ ತೆರಿಗೆಯಿಂದ 350 ಲಕ್ಷ ರೂ., ನೀರಿನ ತೆರಿಗೆಯಿಂದ 200 ಲಕ್ಷ ರೂ.ಮಳಿಗೆಗಳ ಬಾಡಿಗೆಯಿಂದ 60 ಲಕ್ಷ ರೂ., ವಿವಿಧ ಕಟ್ಟಡಗಳ ಬಾಡಿಗೆ ಹರಾಜಿನ ಮೂಲಕ 85 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದೇವೆ. ಕಟ್ಟಡ ಪರವಾನಗಿ 51 ಲಕ್ಷ ರೂ., ಲೇ ಔಟ್ ಅಭಿವೃದ್ಧಿಯಿಂದ 45 ಲಕ್ಷ ರೂ., ಮಾರಾಟದ ಲೈಸೆನ್ಸ್ ಹಾಗೂ ಶುಲ್ಕ ನೀಡುವಿಕೆಯಿಂದ 16 ಲಕ್ಷ ರೂ., ದಂಡ ಹಾಗೂ ಇತರ ಮೂಲಗಳಿಂದ 142 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದೇವೆ. ಸಿಬ್ಬಂದಿ ವೇತನ, ಇಂಧನ, ಮನೆ ಮನೆ ಕಸ ಸಂಗ್ರಹಣೆ, ಕುಡಿಯುವ ನೀರಿನ ಸೌಲಭ್ಯ, ಕಚೇರಿ ನಿರ್ವಹಣೆ ಸೇರಿ 771 ಲಕ್ಷ ರೂ. ಖರ್ಚು ಬರಬಹುದು ಎಂದು ನಿರೀಕ್ಷಿಸಿದ್ದೇವೆ. ಇದರ ಹೊರತಾಗಿ 15ನೇ ಹಣಕಾಸು ಯೋಜನೆಯಿಂದ 182 ಲಕ್ಷ ರೂ., ಎಸ್ಎಫ್ಸಿ ಯೋಜನೆಯಲ್ಲಿ 60 ಲಕ್ಷ ರೂ., ಇತರ ಯೋಜನೆಗಳಿಂದ 100 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದೇವೆ. ನಗರದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಸಾರ್ವಜನಿಕರು ಸಲಹೆ ಸೂಚನೆ ನೀಡುವಂತೆ ವಿನಂತಿಸಿದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ಪರಮಾನಂದ ಹೆಗಡೆ, ಕಳೆದ ವರ್ಷ ನಗರಸಭೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಆ ಬಳಿಕ ಚರ್ಚೆ ನಡೆಸಿತ್ತು. ಆದರೆ, ಸಾರ್ವಜನಿಕರು ಸೂಚಿಸಿದ ಕಾರ್ಯಗಳನ್ನು ನಗರಸಭೆ ಗಮನಿಸದೇ ಬಜೆಟ್ ಮಂಡಿಸಿದೆ. ನಗರದಲ್ಲಿ ಬಿಡಾಡಿ ದನಗಳನ್ನು ಹಿಡಿದು ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ಕೊಂಡವಾಡೆ ನಿರ್ವಿುಸಲಾಗಿದ್ದರೂ ಇಂದಿಗೂ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೊಂಡವಾಡೆ ನಿರ್ವಹಣೆಗೆ ಟೆಂಡರ್ ನೀಡುವುದು ಉತ್ತಮ ಎಂದು ಸಲಹೆ ನೀಡಿದರು.
ಸಾರ್ವಜನಿಕರ ಪರವಾಗಿ ಶೈಲೇಶ್ ಗಾಂಧಿ, ಇರ್ಷಾದ್ ಪಠಾಣ, ಯಶವಂತ ಮರಾಠೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಉಪಾಧ್ಯಕ್ಷ ರಮಾಕಾಂತ ಭಟ್, ಪೌರಾಯುಕ್ತ ಕೆ.ಕಾಂತರಾಜು ಇತರರಿದ್ದರು.
ಸಾರ್ವಜನಿಕರ ಸಭೆಯಲ್ಲಿ ಕೇಳಿಬಂದ ಆಗ್ರಹವನ್ನು ಬಜೆಟ್ನಲ್ಲಿ ಸೇರಿಸಿಕೊಳ್ಳುತ್ತೇವೆ. ಜನವರಿಯಲ್ಲಿ ಇನ್ನೊಂದು ಸಾರ್ವಜನಿಕರ ಸಭೆ ನಡೆಸಿ ಅಭಿಪ್ರಾಯ ಪಡೆದು ಫೆಬ್ರವರಿಯಲ್ಲಿ ಆಯವ್ಯಯ ಮಂಡನೆ ಮಾಡಲಿದ್ದೇವೆ. | ಶರ್ವಿುಳಾ ಮಾದನಗೇರಿ, ಅಧ್ಯಕ್ಷರು, ನಗರಸಭೆ ಶಿರಸಿ
ಕಳೆದ ಬಜೆಟ್ ಮಂಡನೆ ಪೂರ್ವದಲ್ಲಿ ಸಾರ್ವಜನಿಕರ ಸಭೆ ನಡೆಸಿದಾಗ ಬಂದ ಸೂಚನೆ ಅಳವಡಿಸಿಕೊಂಡಿದ್ದೇವೆ. ಬೀದಿ ದೀಪಗಳಿಗೆ ಎಲ್ಇಡಿ ಅಳವಡಿಸುವ ಬಗ್ಗೆ ಬಂದ ಸೂಚನೆ ಅಳವಡಿಸಿಕೊಂಡು ಶೇ. 60ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ನಗರದಲ್ಲಿ 6 ಶೌಚಗೃಹ ನಿರ್ವಿುಸಿದ್ದೇವೆ. ಸಾರ್ವಜನಿಕರಿಗೆ ಒಪ್ಪಿಸುವ ಹಂತದಲ್ಲಿದೆ. ಕೊಳಚೆ ನೀರು ಶುದ್ದೀಕರಣಕ್ಕೆ 18 ಕೋಟಿ ರೂ. ಮಂಜೂರಾಗಿದೆ. ನಗರದಲ್ಲಿ ಕೊಳಚೆ ನೀರು ತಪ್ಪಿಸಲು 50 ಲಕ್ಷ ರೂ. ಖರ್ಚು ಮಾಡಿದ್ದೇವೆ. | ಕಾಂತರಾಜು, ಪೌರಾಯುಕ್ತ ಶಿರಸಿ