ತುಕ್ಕು ಹಿಡಿದಿದೆ ಶಿರಸಿ ನಗರಸಭೆ ಬಸ್

25-sirsi-sanchari tolet bus
Published on

ಶಿರಸಿ: ಸಂಚಾರಿ ಶೌಚಗೃಹಕ್ಕಾಗಿ ನಗರಸಭೆ ಖರೀದಿಸಿದ್ದ ಸಾರಿಗೆ ಸಂಸ್ಥೆಯ ಬಸ್ ತುಕ್ಕು ಹಿಡಿದು ನಿಂತಿದೆ.
ಕಾರವಾರ ಡಿಪೋಗೆ ಸೇರಿದ ಬಸ್ ಅನ್ನು ಕಳೆದ ಐದು ತಿಂಗಳ ಹಿಂದೆ ನಗರಸಭೆಯು ಅಂದಾಜು 5 ಲಕ್ಷ ರೂಪಾಯಿ ಖರ್ಚು ಮಾಡಿ ಖರೀದಿಸಿತ್ತು. ನಂತರ ಬಸ್ ಅನ್ನು ಶೌಚಗೃಹವನ್ನಾಗಿ ಪರಿವರ್ತಿಸಲು ಉಪಕರಣ ಅಳವಡಿಕೆಗಾಗಿ ಚುನಾವಣೆಯ ಪೂರ್ವದಲ್ಲಿ ಟೆಂಡರ್ ಕರೆಯಲಾಗಿತ್ತು. ಒಬ್ಬರೇ ಟೆಂಡರ್ ಹಾಕಿದ್ದರಿಂದ ಅದನ್ನು ರದ್ದುಗೊಳಿಸಲಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಗುತ್ತಿಗೆ ಪಡೆದವರು ಕೆಲಸ ಆರಂಭಿಸುವುದರೊಳಗೆ ಈ ಬಸ್ ಗುಜರಿಗೆ ಹಾಕುವ ಹಂತ ತಲುಪಿದರೂ ಅಚ್ಚರಿಯಿಲ್ಲ ಎಂಬಂತಾಗಿದೆ. ಏಕೆಂದರೆ ಹಳೆಯ ಬಸ್ ಅನ್ನು ಖರೀದಿಸಿ ಅದನ್ನು ನಗರದ ರಾಘವೇಂದ್ರ ವೃತ್ತದ ಬಳಿ ಬಯಲಿನಲ್ಲಿ ನಿಲ್ಲಿಸಲಾಗಿದೆ. ಬಿಸಿಲು, ಮಳೆಗೆ ಬಸ್‌ನ ಬಿಡಿ ಭಾಗಗಳು ತುಕ್ಕು ಹಿಡಿದಿವೆ. ಬಸ್‌ನ ಸುತ್ತಮುತ್ತ ಗಿಡ-ಗಂಟಿಗಳು ಬೆಳೆಯುತ್ತಿವೆ. ನಗರಸಭೆ ತರಾತುರಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಸ್ ಖರೀದಿಸಿ ಒಂದಿಷ್ಟು ಹಣವನ್ನು ವ್ಯರ್ಥ ಮಾಡಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಏನಿದು ಶೌಚಗೃಹ: ನಗರ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಶ್ರೀ ಮಾರಿಕಾಂಬಾ ಜಾತ್ರೆಯ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಸಂಚಾರಿ ಶೌಚಗೃಹ ವ್ಯವಸ್ಥೆ ಮಾಡಲು ನಗರಸಭೆ ಚಿಂತನೆ ನಡೆಸಿತ್ತು. ಅದರಂತೆ ಸಾರಿಗೆ ಸಂಸ್ಥೆ ಬಸ್ ಖರೀದಿಸಿದೆ. ಬಸ್‌ನ ಒಳಗೆ ಶೌಚಗೃಹ, ಮೂತ್ರಖಾನೆ ಇರಲಿದೆ. ಒಟ್ಟಿನಲ್ಲಿ ಸಾರ್ವಜನಿಕರು ಶೌಚಕ್ಕೆ ಪರದಾಡುವುದನ್ನು ತಪ್ಪಿಸುವುದು ನಗರಸಭೆಯ ಉದ್ದೇಶವಾಗಿದೆ.
ಆಗಿರುವ ಸಮಸ್ಯೆಗಳೇನು?: ಸಾರಿಗೆ ಸಂಸ್ಥೆಯ ಬಸ್‌ನ ವಿಮೆ ಅವಧಿ ಮುಕ್ತಾಯಗೊಂಡಿದೆ. ಹೊಸ ವಿಮೆ ಮಾಡಿಸಲು ತಡವಾಗುತ್ತಿದೆ. ಸಾರಿಗೆ ಸಂಸ್ಥೆಯ ಹೆಸರಿನಿಂದ ನಗರಸಭೆ ಹೆಸರಿಗೆ ಬಸ್‌ನ ಕಾಗದ ಪತ್ರಗಳ ವರ್ಗಾವಣೆ ಪ್ರಕ್ರಿಯೆ ಸಹ ವಿಳಂಬವಾಗಿದೆ. ಹೀಗಾಗಿ, ಬಸ್ ಇನ್ನೂ ಶೌಚಗೃಹವಾಗಿ ಮಾರ್ಪಾಡುಗೊಳ್ಳದಿರಲು ಮುಖ್ಯ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net