ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು

28-MODI-1 KIREETA
Published on

ಶಿರಸಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಪರಾಧವನ್ನು ತಡೆಯುವ ಬದಲು ಸಮಾಜ ವಿರೋಧಿ, ದೇಶ ವಿರೋಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶಿರಸಿ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಬಿಜೆಪಿಯ ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಾಡಹಗಲಲ್ಲೇ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಸರ್ಕಾರದ ನಡೆಗಳನ್ನು ಕಟುವಾಗಿ ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮತಕ್ಕಾಗಿ ಹಸಿದುಕೊಂಡವರು ತಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ಧೈರ್ಯದಲ್ಲಿ ಕಾಲೇಜ್ ಕ್ಯಾಂಪಸ್‌ಗೆ ನುಗ್ಗಿ ಹತ್ಯೆ ಮಾಡಿದ್ದಾರೆ. ರಾಜ್ಯದ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಈ ಘಟನೆ ಅನುಮಾನ ಹುಟ್ಟಿ ಹಾಕಿದೆ. ಪಾಲಕರಿಗೆ ತಮ್ಮ ಹೆಣ್ಣು ಮಕ್ಕಳ ರಕ್ಷಣೆಯ ಚಿಂತೆ ಕಾಡಲಾರಂಭಿಸಿದೆ. ಕೆಟ್ಟ ಕಾನೂನು ವ್ಯವಸ್ಥೆ ಕಾಂಗ್ರೆಸ್ ಸರ್ಕಾರದ ಹೆಗ್ಗುರುತಾಗಿಬಿಟ್ಟಿದೆ ಎಂದು ಗಂಭೀರ ಆರೋಪ ಮಾಡಿದರು.
2014ರ ಪೂರ್ವದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಫೋಟದಂಥ ಘಟನೆಗಳು ನಡೆಯುತ್ತಿದ್ದವು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅದು ಸ್ಥಗಿತವಾಗಿದೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರು ಹೈಟೆಕ್ ಸಿಟಿಯಲ್ಲಿ ಸ್ಫೋಟ ಸಂಭವಿಸಿತು. ಕರ್ನಾಟಕದ ಗೃಹ ಸಚಿವರು ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ಹೇಳಿದರು. ಸಿಲಿಂಡರ್ ಸ್ಫೋಟವಾಗಿದೆಯೋ ಅಥವಾ ಇವರ ತಲೆಯೋ ಎಂದು ಲೇವಡಿ ಮಾಡಿದರು.
ಎನ್‌ಐಎ ತನಿಖೆ ಆರಂಭಿಸಿ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳನ್ನು ಬಂಧಿಸಿದೆ. ಕಾಂಗ್ರೆಸ್ ಎಲ್ಲಿಯವರೆಗೆ ವೋಟ್ ಬ್ಯಾಂಕ್‌ಗಾಗಿ ಪಿಎಫ್‌ಐನಂಥ ಸಂಘಟನೆಗಳಿಗೆ ಸಹಾಯ ಮಾಡುತ್ತದೋ ಅಲ್ಲಿಯವರೆಗೆ ಇಂಥ ಘಟನೆಗಳು ನಡೆಯುತ್ತವೆ. ನಾವು ಪಿಎಫ್‌ಐ ನಿಷೇಧಿಸಿದ್ದರಿಂದ ಅದರ ನೇತಾರರು ಜೈಲಿನಲ್ಲಿದ್ದಾರೆ. ದೇಶದ ಜನರನ್ನು ಹೊಡೆದು ಓಡಿ ಹೋಗುತ್ತಿದ್ದರು. ನಾವು ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆ ಎಂದು ತಮ್ಮ ಸರ್ಕಾರದ ದಿಟ್ಟ ಕ್ರಮಗಳನ್ನು ಹೆಮ್ಮೆಯಿಂದ ಹೇಳಿದರು.

ಅಡಕೆಗೆ ಜಿಐ ಟ್ಯಾಗ್ ಕೊಟ್ಟಿದ್ದು ನಾವು
ಶಿರಸಿಯ ಮಾರಿಕಾಂಬಾ ದೇವಿ, ಬನವಾಸಿಯ ಮಧುಕೇಶ್ವರ, ಸೋದೆ ವಾದಿರಾಜರು ಹಾಗೂ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳಿಗೆ ನಮನ ಸಲ್ಲಿಸಿ ಮೋದಿ ಭಾಷಣ ಆರಂಭಿಸಿದರು. ಕನ್ನಡದ ಮೊದಲ ರಾಜಧಾನಿ ಕದಂಬ ವಂಶವನ್ನು ನೆನೆದರು. ಶಿರಸಿಯ ಅಡಕೆಗೆ ಜಿಐ ಟ್ಯಾಗ್ ಎಂದರೆ ಉತ್ತರ ಕನ್ನಡದ ಗುರುತನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದರು. ಕರಾವಳಿಯಲ್ಲಿ ಬಂದರು ನಿರ್ಮಾಣವಾಗುತ್ತಿದೆ. ಮತ್ಸ್ಯ ಸಂಪದ ಯೋಜನೆ ಜಾರಿಗೆ ತರಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ಮಂತ್ರಾಲಯ ಸ್ಥಾಪಿಸಲಾಗಿದೆ. ನಿಮ್ಮ ಊರಿನಲ್ಲಿ ವಿದ್ಯುತ್ ಸೌಲಭ್ಯ, ನೀರು ಬಂದಿದೆ ಎಂದು ಸ್ಥಳೀಯ ವಿಚಾರಗಳ ಕುರಿತು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net