

ಶಿರಸಿ: ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ರಾಜ್ಯದ ಸರ್ವಾಂಗೀಣ ಪ್ರಗತಿ ಗಮನದಲ್ಲಿಟ್ಟುಕೊಂಡು ಯೋಜನೆ ಹಾಕಿಕೊಳ್ಳುತ್ತಿದ್ದರು. ನಾನು ಅವರೊಂದಿಗೆ ಬೆಳೆದು ಬಂದವನು, ಅವರ ಆದರ್ಶ ಸದಾ ಮಾದರಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಎಂಇಎಸ್ ಸಂಸ್ಥೆಯ ಚೈತನ್ಯ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ವರ್ಷಗಳಿಂದ ನಾನು ಎಂಇಎಸ್ ಸಂಸ್ಥೆಯ ಜತೆಗಿದ್ದೇನೆ. ರಾಮಕೃಷ್ಣ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಬೆಳೆದುಬಂದ ಸಂಸ್ಥೆ ಎಂಇಎಸ್. ಅವರ ಬಳಿಕ ಡಾ. ವಿ.ಎಸ್. ಸೋಂದೆ, ಶಾಂತಾರಾಮ ಹೆಗಡೆ ಅವರಂತ ಮುತ್ಸದ್ದಿಗಳೇ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನೇ ನೀಡಬೇಕು. ಆಗ ಮಾತ್ರ ಸಂಸ್ಥೆಯ ಉದ್ದೇಶ ಈಡೇರಲು ಸಾಧ್ಯ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾಷೆಗಳ ಮೇಲಿನ ಅಭಿಮಾನ ಹೆಚ್ಚಿಸಿಕೊಳ್ಳಬೇಕು. ಭಾಷೆ ಮೂಲಕ ಸೌಹಾರ್ದ ಬೆಳೆಸಿಕೊಳ್ಳಬೇಕು ಹೊರತು ಸಂಘರ್ಷಕ್ಕೆ ಎಡೆಮಾಡಿಕೊಳ್ಳಬಾರದು. ಎಂಇಎಸ್ ಸಂಸ್ಥೆಯನ್ನು ಕಟ್ಟಿಬೆಳೆಸಲು ಸಾಕಷ್ಟು ಗಣ್ಯರು ಶ್ರಮಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಭೀಮಣ್ಣ ನಾಯ್ಕ, ಎಂಇಎಸ್ ಸಂಸ್ಥೆ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಚೈತನ್ಯ ಕಾಲೇಜು ಸಮಿತಿ ಅಧ್ಯಕ್ಷ ಕೆ.ಪಿ. ಲೋಕೇಶ ಹೆಗಡೆ ಮಾತನಾಡಿದರು.
ಹಿರಿಯ ಸಹಕಾರಿಗಳಾದ ಜಿ.ಎಂ. ಹುಳಗೋಳ, ಜಿ.ಟಿ. ಹೆಗಡೆ ತಟ್ಟಿಸರ, ಆರ್.ಎನ್. ಹೆಗಡೆ ಬಂಡಿಮನೆ, ಕಟ್ಟಡ ನಿರ್ವಣದಲ್ಲಿ ಶ್ರಮಿಸಿದ ಇಂಜಿನಿಯರ್, ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ನಿತಿನ್ ಕಾಸರಗೋಡು, ಉಪಾಧ್ಯಕ್ಷ ಎಂ.ಜಿ. ಹೆಗಡೆ ಗಡಿಮನೆ ಇತರರು ಇದ್ದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಜಾರಿಗೊಳಿಸಿದ್ದಾರೆ. ಸಂಪೂರ್ಣ ಅವಧಿಗೆ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಆರ್.ವಿ. ದೇಶಪಾಂಡೆ ಹೇಳಿದರು.ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಶಿಸ್ತು ಇರಬೇಕು. ಸಿಎಂ ಒಳ್ಳೆಯ ಕೆಲಸ ಮಾಡುತ್ತಿರುವಾಗ ಪಕ್ಷಕ್ಕೂ ಶಕ್ತಿ ಬರುತ್ತದೆ. ಬೇರೆ ವಿಚಾರ ಮಾಡಬಾರದು ಎಂದರು.