ದುಶ್ಚಟಗಳ ವಿರುದ್ಧ ಸಂಘಟನೆಗಳ ಕಾರ್ಯ ಶ್ಲಾಘನೀಯ

7-SIRSI-1
Published on

ಶಿರಸಿ: ಮದ್ಯಪಾನ ಮತ್ತಿತರ ದುಶ್ಚಟಗಳ ವಿರುದ್ಧ ಇಂತಹ ಸಂಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶನಿವಾರ ಆಯೋಜಿಸಿದ್ದ ಗಾಂಧಿಸ್ಮತಿ ಮತ್ತು ಮದ್ಯಮುಕ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಜನಜಾಗೃತಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಯಶಸ್ವಿಯಾಗಿರುವುದು ಶಿರಸಿ ತಾಲೂಕಿನಲ್ಲಿ. ಇಲ್ಲಿ ಸಾವಿರಾರು ವ್ಯಸನಿಗಳು ಮದ್ಯಪಾನ ತ್ಯಜಿಸಿ ಸುಂದರ ಜೀವನ ನಡೆಸುತ್ತಿದ್ದಾರೆ. ಕುಡಿತ ಬಿಟ್ಟವರು ಇಂದು ಸಾಧಕರಾಗಿದ್ದಾರೆ ಎಂದರು.
ಸಮಾವೇಶದ ನಿರ್ಣಯ:
ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ಕಷ್ಟ-ನಷ್ಟ ಮತ್ತು ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತು ವೈಜ್ಞಾನಿಕ ಅಧ್ಯಯನ ಮಾಡಬೇಕು. ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಗೊಳಿಸಬೇಕು.
ರಾಜ್ಯಾದ್ಯಂತ ಅಬಕಾರಿ ಟಾರ್ಗೆಟ್ ಪದ್ಧತಿ ರದ್ದುಗೊಳಿಸಬೇಕು. ಅಬಕಾರಿ ಕಾಯ್ದೆಯನ್ನು ಪರಿಷ್ಕರಿಸಿ ತಿದ್ದುಪಡಿ ಮಾಬೇಕು. ಜನಜಾಗೃತಿ ವೇದಿಕೆ ನಡೆಸುವ ಕಾರ್ಯಚಟುವಟಿಕೆಗಳಿಗೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುವಂತೆ ಆದೇಶ ಹೊರಡಿಸಬೇಕು.
ಸರ್ಕಾರ ಹೊಸ ಮದ್ಯದಂಗಡಿ, ಬಾರ್, ವೈನ್‌ಶಾಪ್‌ಗಳಿಗೆ ಪರವಾನಗಿ ನೀಡಬಾರದು. ಸ್ಥಳೀಯ ಜನಪರ ಸಂಘಟನೆಗಳು, ಒಕ್ಕೂಟಗಳು, ಧಾರ್ಮಿಕ ಕೇಂದ್ರಗಳು, ದಲಿತ ಸಂಘಟನೆಗಳು ಆಕ್ಷೇಪಿಸಿರುವ ಕಡೆಗಳಲ್ಲಿ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಎಂಬುದು ಸೇರಿ ಹತ್ತಾರು ಹಕ್ಕೊತ್ತಾಯ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net