

ಶಿರಸಿ: ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹು ರ್ಚಚಿತವಾಗಿದ್ದ ಬೆಣ್ಣೆ ಹೊಳೆ ಸೇತುವೆಯನ್ನು ಈಗ ನೆಲಸಮಗೊಳಿಸಲಾಗಿದೆ. ಇದರೊಂದಿಗೆ ಈ ರಸ್ತೆ ನಿರ್ಮಾಣ ಕಾಮಗಾರಿ ಇನ್ನಷ್ಟು ವೇಗ ಪಡೆದುಕೊಂಡಂತಾಗಿದೆ.
ಶಿರಸಿಯಿಂದ ಕುಮಟಾವರೆಗೆ ಒಟ್ಟೂ 9 ಸೇತುವೆಗಳನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ. ಇಲ್ಲಿಯ ಅಮ್ಮಿನಳ್ಳಿಯ ಚಂಡಮುರುಕನ ಹಳ್ಳ, ಖುರ್ಸೆ ಸಮೀಪದ ಹಳ್ಳ ಸೇರಿ ಕೆಲ ಸೇತುವೆಗಳ ಕಾಮಗಾರಿ ಸವಾಲಿನ ಕೆಲಸವಾಗಿತ್ತು. ಈಗಾಗಲೇ ಸುಮಾರು 6 ಕಡೆಗಳಲ್ಲಿ ಸೇತುವೆ ಕೆಡವಿ ಪಕ್ಕದಲ್ಲಿ ಪೈಪ್ ಅಳವಡಿಸುವ ಮೂಲಕ ಸಣ್ಣ ಮತ್ತು ಸ್ಥಳೀಯರ ವಾಹನಗಳಿಗೆ ಗುತ್ತಿಗೆದಾರ ಆರ್ಎನ್ಎಸ್ ಕಂಪನಿ ದಾರಿ ಮಾಡಿಕೊಟ್ಟಿದೆ. 9 ಸೇತುವೆಗಳ ಪೈಕಿ ಬೆಣ್ಣೆ ಹೊಳೆ ಸೇತುವೆಯ ನಿರ್ಮಾಣ ಸವಾಲಿನ ಕಾರ್ಯವಾಗಿತ್ತು. ಸುಮಾರು 50 ಅಡಿಗಳಷ್ಟು ಪ್ರಪಾತ, ಇಕ್ಕೆಲಗಳಲ್ಲಿಯೂ ಕಡಿದಾದ ಮಣ್ಣು ದಿನ್ನೆಗಳನ್ನು ಹೊಂದಿರುವ ಈ ಜಾಗದಲ್ಲಿ ಬೇಸಿಗೆಯ ದಿನಗಳಲ್ಲಿಯೂ ನೀರು ಹರಿಯುತ್ತದೆ. ಸಾಮಾನ್ಯ ಮಳೆ ಸುರಿದರೂ ಬೆಣ್ಣೆಹೊಳೆಯಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಬಂದು ತಾತ್ಕಾಲಿಕ ಸಂಚಾರಕ್ಕೆ ಮಾಡಿಕೊಂಡಿರುವ ರಸ್ತೆಯನ್ನೂ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇತ್ತು.
ಡಿ. 2ರಿಂದಲೇ ಶಿರಸಿ- ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ರಸ್ತೆ ಸಂಚಾರ ನಿಷೇಧಿಸಿದ ಮಾರನೇ ದಿನದಿಂದಲೇ ಬೆಣ್ಣೆಹೊಳೆ ಸೇತುವೆಯನ್ನು ಕೆಡವಲು ನಿರ್ಧರಿಸಲಾಗಿತ್ತು. ಆದರೆ, ಎಡಬಿಡದೆ ಸುರಿದ ಮಳೆಯಿಂದಾಗಿ ಆರ್ಎನ್ಎಸ್ ಕಂಪನಿ ಈ ಸೇತುವೆ ಕೆಡವಲು ವಿಳಂಬ ಮಾಡಿದೆ. ಸ್ಥಳೀಯರ ಮತ್ತು ಕೆಲಸಗಾರರ ವಾಹನ ದಾಟಿಸುವ ಸಲುವಾಗಿ ಸೇತುವೆ ಪಕ್ಕದಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕಿತ್ತಾದರೂ ನೀರಿನ ಹರಿವು ಜಾಸ್ತಿ ಇದ್ದ ಕಾರಣ ಮತ್ತು ಒಂದೊಮ್ಮೆ ಪ್ರವಾಹ ಬಂದಲ್ಲಿ ಈ ಕಚ್ಚಾ ರಸ್ತೆಯೇ ಕೊಚ್ಚಿಹೋಗುವ ಸಾಧ್ಯತೆ ಇತ್ತು. ಮಳೆ ನಿಂತ ಮೇಲೆ, ಡಿ. 10ರ ಬಳಿಕ ಸೇತುವೆಯ ತೆರವು ಕಾರ್ಯವನ್ನು ಕಂಪನಿ ಆರಂಭಿಸಿದೆ. ಪ್ರತಿ ದಿನವೂ ಮೂರು ಜೆಸಿಬಿ, ನಾಲ್ಕಾರು ಟ್ರ್ಯಾಕ್ಟರ್ಗಳು, 15ಕ್ಕೂ ಅಧಿಕ ಕೆಲಸಗಾರರು, ಕಾಂಕ್ರೀಟ್ ಒಡೆಯುವ ಯಂತ್ರಗಳನ್ನು ಒಳಗೊಂಡು ಸತತ 12 ದಿನಗಳ ಕಾಮಗಾರಿಯ ಬಳಿಕ ಬೆಣ್ಣೆ ಹೊಳೆ ಸೇತುವೆ ಕೆಡವುವ ಕಾರ್ಯ ಈಗ ಬಹುತೇಕ ಪೂರ್ಣಗೊಂಡಿದೆ.
76 ವರ್ಷಗಳ ಹಿಂದಿನ ಸೇತುವೆ
1948ರಲ್ಲಿ ಕಲ್ಲುಗಳಿಗೆ ಗಾರೆ ಬಳಸಿ ಒಟ್ಟೂ 5 ಕಂಬಗಳ ಮೂಲಕ ಬೆಣ್ಣೆಹೊಳೆ ಸೇತುವೆ ನಿರ್ವಿುಸಿ, ಮೇಲ್ಗಡೆ ಕಾಂಕ್ರೀಟ್ ಹಾಕಲಾಗಿತ್ತು. ಪ್ರವಾಹದ ನೀರು ಅಬ್ಬರದಿಂದ ಕಂಬಗಳಿಗೆ ಡಿಕ್ಕಿ ಹೊಡೆಯುತ್ತಿದ್ದ ಕಾರಣ ಕಳೆದ 10 ವರ್ಷಗಳ ಹಿಂದೆ ಸೇತುವೆಗೆ ಹಾನಿ ಸಂಭವಿಸಿತ್ತು. ಈ ವೇಳೆ ಸಹ ರಸ್ತೆ ಸಂಚಾರ ಸ್ಥಗಿತಗೊಳಿಸಿ ಬೆಣ್ಣೆ ಹೊಳೆ ಸೇತುವೆ ರಿಪೇರಿ ಕಾರ್ಯ ನಡೆಸಲಾಗಿದೆ.
ಈಗ ಸಂಪೂರ್ಣ ಸೇತುವೆಯನ್ನೇ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಕೆಡವಿದ ಬಳಿಕ ಬಳಸಲಾದ ಕಬ್ಬಿಣವನ್ನು ಗ್ಯಾಸ್ ಕಟರ್ ಬಳಸಿ ಹೊರಗಡೆ ತರಲಾಗುತ್ತಿದೆ. ಈ ಜಾಗವನ್ನು ಸ್ವಚ್ಛಗೊಳಿಸಿ ಹೊಸ ಸೇತುವೆ ನಿರ್ವಣಕ್ಕೆ ಜಾಗ ಮಾಡಿಕೊಳ್ಳಲಾಗುತ್ತಿದೆ. ಹೊಸ ಸೇತುವೆ ನಿರ್ವಣಕ್ಕೆ ಸುಮಾರು ನಾಲ್ಕು ತಿಂಗಳು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ರಸ್ತೆ ಸಂಚಾರ ನಿಷೇಧ ಫೆ. 25ರವರೆಗೆ ಮಾತ್ರ ಇದ್ದು, ಈಗಾಗಲೇ 22 ದಿನಗಳು ಕಳೆದುಹೋಗಿವೆ. ಇನ್ನು 64 ದಿನಗಳು ಬಾಕಿ ಇದ್ದು, ಆ ಬಳಿಕ ಶಿರಸಿ ಕುಮಟಾ ರಸ್ತೆ ಮತ್ತೆ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಹೀಗಾಗಿ, ಕಾಮಗಾರಿಯನ್ನು ಇನ್ನಷ್ಟು ವೇಗಗೊಳಿಸಬೇಕಾದ ಅನಿವಾರ್ಯತೆಯಲ್ಲಿ ಗುತ್ತಿಗೆದಾರ ಆರ್ಎನ್ಎಸ್ ಕಂಪನಿ ಇದೆ.
ಬೆಣ್ಣೆಹೊಳೆಯ ಹಳೇ ಸೇತುವೆ ತೆರವುಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿಯೇ ಹೊಸ ಸೇತುವೆಯ ಫೌಂಡೇಶನ್ ಕೆಲಸ ಆರಂಭಿಸುತ್ತೇವೆ. ಕೆಲ ದಿನಗಳಲ್ಲಿಯೇ ಮೊಸಳೆಗುಂಡಿ ಸೇತುವೆ ತೆರವುಗೊಳಿಸಲಿದ್ದೇವೆ. | ಗೋವಿಂದ ಭಟ್, ಇಂಜಿನಿಯರ್, ಆರ್ಎನ್ಎಸ್