

ಮಂಜುನಾಥ ಸಾಯೀಮನೆ ಶಿರಸಿ: ಜಿಲ್ಲೆಯ ಬ್ಯೂಸಿ ರಸ್ತೆಗಳಲ್ಲಿ ಒಂದಾಗಿರುವ, ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ 766 ಇ (Sirsi-Kumata Road) ಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಕ್ಷಣಗಣನೆ ಆರಂಭವಾಗಿದೆ. ನ. 15ರಿಂದ ಇಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿದೆ. ಶಿರಸಿ ಕುಮಟಾ ರಸ್ತೆ Sirsi-Kumata Road ಜಿಲ್ಲೆಯ ಪ್ರಮುಖ ರಸ್ತೆಗಳಲ್ಲೊಂದು. ಉತ್ತರ ಕರ್ನಾಟಕ್ಕೂ, ಕರಾವಳಿಗೂ ಕೊಂಡಿ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿ ಗಂಟೆಗೆ 200ಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ವಾಹನಗಳ ದಟ್ಟಣೆಯ ನಡುವೆಯೂ 16 ಮೀ. ಅಗಲದ ಈ ರಸ್ತೆಯನ್ನು ಆರ್ ಎನ್ ಎಸ್ ಬಹುತೇಕ ಪೂರ್ಣಗೊಳಿಸಿದೆ. ಶಿರಸಿಯಿಂದ ದೇವಿಮನೆ ಘಟ್ಟ ಪ್ರದೇಶದವರಗೆ ಭಾಗಶಹ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೆ ಅತ್ತ ಕುಮಟಾದಿಂದ ಕತಗಾಲ ವರೆಗೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನು ದೇವಿಮನೆ ಘಟ್ಟ ಪ್ರದೇಶದಲ್ಲಿ 5 ಕಿ.ಮೀ., ಬಂಡಲ ಘಟ್ಟ ಪ್ರದೇಶದಲ್ಲಿ 1 ಕಿ.ಮೀ. ರಸ್ತೆ ನಿರ್ಮಾಣವಾಗಬೇಕಿದೆ. ಶಿರಸಿ ಕುಮಟಾ ಹೆದ್ದಾರಿಯ ನಿರ್ಮಾಣ ಕಾಮಗಾರಿ ಈಗ ನಿರ್ಣಾಯಕ ಹಂತದಲ್ಲಿದೆ. ಸಾಗರ ಮಾಲಾ ಯೋಜನೆ ಅಡಿಯಲ್ಲಿ 2018ರಲ್ಲಿಯೇ ಶಿರಸಿ ಕುಮಟಾ ರಸ್ತೆ ರಾಷ್ಟಿçÃಯ ಹೆದ್ದಾರಿಗೆ ಮೇಲ್ದರ್ಜೆಗೇರಿ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತಾದರೂ ಎದುರಾದ ಅಡೆ ತಡೆಗಳು ಹಲವು. 440 ಕೋಟಿ ರೂ. ಹಣ ಮಂಜೂರಾಗಿದ್ದರೂ ಆರಂಭದಲ್ಲಿಯೇ ಪರಿಸರ ಪ್ರಿಯರ ಅಡ್ಡಗಾಲಿನಿಂದ ಎರಡು ವರ್ಷ ವಿಳಂಬವಾಗಿ ಕಾಮಗಾರಿ ಶುರುವಾಗಿತ್ತು. ಅರಣ್ಯ ಇಲಾಖೆಯಿಂದ ಅಂತೂ ಅನುಮತಿ ಲಭಿಸಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲ ತೊಂದರೆ ಉಂಟಾಗಿ ಹಲವರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಮತ್ತೆ ವಿಳಂಬವಾಗಿತ್ತು. ಗುತ್ತಿಗೆದಾರರಾದ ಆರ್ ಎನ್ ಎಸ್ ಕಂಪನಿ ಅಂತೂ ಇಂತೂ ಎಲ್ಲ ವಿಘ್ನಗಳನ್ನೆಲ್ಲ ನಿವಾರಿಸಿಕೊಂಡು ರಸ್ತೆ ಕಾಮಗಾರಿ ನಡೆಸುತ್ತಿದೆ. ವಾಹನ ದಟ್ಟಣೆಯ ಮಧ್ಯೆ ರಸ್ತೆ ಕಾಮಗಾರಿ ನಡೆಸುವುದು ಕಷ್ಟ, ಕೆಲಸವೂ ನಿಧಾನವಾಗಿ ಸಾಗುತ್ತದೆ, ಅವಘಡಗಳೂ ಜಾಸ್ತಿ, ಹೀಗಾಗಿ, ಕನಿಷ್ಟ 6 ತಿಂಗಳುಗಳ ಕಾಲ ಈ ಮಾರ್ಗದಲ್ಲಿ ರಸ್ತೆ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ನಾವೂ ತ್ವರಿತವಾಗಿ ಕಾಮಗಾರಿ ನಡೆಸುತ್ತೇವೆ ಎಂದು ಗುತ್ತಿಗೆದಾರ ಆರ್ ಎನ್ ಎಸ್ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ವರ್ಷವೇ ಜಿಲ್ಲಾಡಳಿಕ್ಕೆ ಕೇಳಿಕೊಂಡಿತ್ತು. ಆದರೆ, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಪ್ರಸ್ತಾವಕ್ಕೆ ಸೊಪ್ಪು ಹಾಕಿರಲಿಲ್ಲ.ಈಗ ರಸ್ತೆ ನಿರ್ಮಾಣದ ಕೆಲಸ ಪ್ರಮುಖ ಹಂತಕ್ಕೆ ಬಂದಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ನಿರ್ಮಿಸಬೇಕಾಗಿದೆ. ಇಲ್ಲಿ ಕೇವಲ 8 ಮೀಟರ್, ಕೆಲವೆಡೆ 12 ಮೀಟರ್ ಜಾಗದಲ್ಲಿಯೇ ರಸ್ತೆ ನಿರ್ಮಿಸಬೇಕಿದೆ. ಕಳೆದ ಬೇಸಿಗೆಯಲ್ಲಿ ರಸ್ತೆ ಪಕ್ಕದ ತಡೆಗೋಡೆಗಳನ್ನು ಆರ್ ಎನ್ ಎಸ್ ನಿರ್ಮಿಸಿದ್ದರೂ, ರಸ್ತೆ ನಿರ್ಮಾಣಕ್ಕೆ ವಾಹನ ದಟ್ಟಣೆ ಸಮಸ್ಯೆ ತಂದೊಡ್ಡಿತ್ತು. ಇಕ್ಕಟ್ಟಾದ ಈ ಜಾಗದಲ್ಲಿ ವಾಹನ ದಾಟಿಸಲು ಸಾಧ್ಯವಾಗದ ಕಾರಣ ಕಳೆದ ಬೇಸಿಗೆಯಲ್ಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಮತ್ತೆ ಮನವಿ ಮಾಡಿ, ಕನಿಷ್ಟ 6 ತಿಂಗಳು ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ಅನುವು ಮಾಡಿಕೊಡಲು ವಿನಂತಿಸಿತ್ತು. ಈ ಹಿನ್ನೆಲೆಯಲ್ಲಿ ಜೂ. 25ರಂದೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ, ಈ ವರ್ಷದ ಅಕ್ಟೋಬರ್ 15ರಿಂದ 2025ರ ಫೆ.25ರವರೆಗೆ ಶಿರಸಿ ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗ ಸೂಚಿಸಿದ್ದರು. ಆದರೆ, ಈ ವರ್ಷ ಇಲ್ಲಿಯವರೆಗೂ ಸುರಿದ ಮಳೆಯಿಂದಾಗಿ ಅಕ್ಟೋಬರ್ 15ರಿಂದ ರಸ್ತೆ ಕಾಮಗಾರಿ ಆರಂಭಿಸಲು ಸಾಧ್ಯವಾಗದೇ ವಾಹನ ಸಂಚಾರ ಮುಂದುವರಿದಿತ್ತು. ಈಗ ನ. 15ರಿಂದ ಸಂಚಾರವನ್ನು ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ.
ಶಿರಸಿ ಕುಮಟಾ 60 ಕಿ.ಮೀ. ರಸ್ತೆಯಲ್ಲಿ ಪ್ರಮುಖವಾಗಿ 11 ಸೇತುವೆ, ಸಿಡಿಗಳ ನಿರ್ಮಾಣವಾಗಬೇಕಿದೆ. ಇವುಗಳಲ್ಲಿ 2 ಸೇತುವೆಯನ್ನು ಈಗಾಗಲೇ ನಿರ್ಮಿಸಲಾಗಿದ್ದು ಇನ್ನೂ 9 ಕಡೆಗಳಲ್ಲಿ ಸೇತುವೆ ಆಗಬೇಕಿದೆ. ರಾಗಿಹೊಸಳ್ಳಿ ಬಳಿಯ ಬೆಣ್ಣೆಹೊಳೆಗೆ ಬೃಹತ್ ಪ್ರಮಾಣದ ಸೇತುವೆ ನಿರ್ಮಾಣಗೊಳ್ಳಬೇಕಿದೆ. ಇಲ್ಲಿ ನದಿ ಪ್ರಪಾತದಲ್ಲಿರುವ ಕಾರಣ ಸಿಮೆಂಟ್ ಪೈಪ್ ಅಳವಡಿಸಿ ವಾಹನ ದಾಟಲು ತಾತ್ಕಾಲಿಕ ವ್ಯವಸ್ಥೆ ಮಾಡಲೂ ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಅಮ್ಮಿನಳ್ಳಿ ಬಳಿಯ ಚಂಡಮುರುಕನಹಳ್ಳದಲ್ಲಿಯೂ ಇದೇ ಸ್ಥಿತಿ ಇದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ 5 ಕಿಮೀಗಳಷ್ಟು ದೂರ ರಸ್ತೆ ನಿರ್ಮಾಣಕ್ಕೆ ಕೇವಲ 12 ಮೀಟರ್ ಅಗಲದ ಜಾಗವಷ್ಟನ್ನೇ ನೀಡಲಾಗಿದೆ. ಇದರಲ್ಲಿಯ ಒಂದು ಕಡೆ ಚರಂಡಿ ನಿರ್ಮಿಸಿ, ಇನ್ನೊಂದು ಕಡೆ ತಡೆಗೋಡೆ ನಿರ್ಮಿಸಿ, 8 ಮೀ.ಅಗಲದಲ್ಲಿ ರಸ್ತೆ ನಿರ್ಮಿಸಬೇಕಾಗಿದೆ. ಈ ಇಕ್ಕಟ್ಟಾದ ಜಾಗದಲ್ಲಿ ರಸ್ತೆ ನಿಮಾರ್ಣಕ್ಕೆ ಅಗತ್ಯ ಸಾಮಗ್ರಿ ಹೊತ್ತು ತರುವ ವಾಹನಗಳೇ ದಾಟಲು ಕಷ್ಟವಾಗುವ ಕಾರಣ ಬಸ್ ಅಥವಾ ಇನ್ನಿತರ ವಾಹನಗಳು ಬಂದರೆ ದಾಟಲು ಸಾಧ್ಯವಾಗದಂತಾಗುತ್ತದೆ. ಅಲ್ಲದೇ, ಈಗಾಗಲೇ ಮಳೆಗಾಲದ ದಿನಗಳಲ್ಲಿ ರಾಗಿಹೊಸಳ್ಳಿ, ಬಂಡಲ ಬಳಿ ಮಣ್ಣು ಕುಸಿತವಾಗಿ ನಾಲ್ಕಾರು ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮುಂದಿನ ಮಳೆಗಾಲದಲ್ಲಿ ಮತ್ತೆ ಮಣ್ಣು ಕುಸಿತವಾಗದಂತೆ ತಡೆಗೋಡೆಯನ್ನೂ ನಿರ್ಮಿಸಬೇಕಾದ ಅಗತ್ಯತೆ ಇದೆ.
ಜಿಲ್ಲಾಧಿಕಾರಿಗಳು ಈಗಾಗಲೇ ರಸ್ತೆ ಸಂಚಾರ ನಿಷೇಧಿಸಿ ದಿನಾಂಕವನ್ನೂ ನಿಗದಿಪಡಿಸಿದ್ದಾರೆ. ಈ ಆದೇಶದ ಅನ್ವಯ ರಸ್ತೆ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ನಡೆಸಲು ಅನುವು ಮಾಡಿಕೊಡಲಾಗುತ್ತದೆ. ಕೆ. ಕಾವ್ಯಾರಾಣಿ, ಉಪವಿಭಾಗಾಧಿಕಾರಿ, ಶಿರಸಿ. ದೇವಿಮನೆ ಘಟ್ಟ ಪ್ರದೇಶದಲ್ಲಿ ಈಗ ರಸ್ತೆ ನಿರ್ಮಿಸಬೇಕಿರುವುದರಿಂದ ವಾಹನಗಳ ಓಡಾಟಕ್ಕೆ ಜಾಗ ಲಭಿಸುವುದಿಲ್ಲ. ನ.15ರಿಂದ ಸಂಚಾರ ಸ್ಥಗಿತಗೊಂಡ ಬಳಿಕ ತ್ವರಿತ ಕಾಮಗಾರಿ ನಡೆಸಿ, ನಿಗದಿತ ಅವಧಿಗೆ ಮುನ್ನವೇ ಮತ್ತೆ ಸಂಚಾರಕ್ಕೆ ಅವಕಾಶ ನೀಡಲು ಯತ್ನಿಸುತ್ತೇವೆ. - ಗೋವಿಂದ ಭಟ್, ಇಂಜಿನಿಯರ್, ಆರ್ ಎನ್ ಎಸ್.