

ಶಿರಸಿ: ನಗರದ ಕೋಟೆಕೆರೆಯ ರಾಜಕಾಲುವೆಯಲ್ಲಿ ಸರಿಯಾಗಿ ನೀರು ಹಾದುಹೋಗದ ಕಾರಣದಿಂದ ಅಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಪ್ರಾರಂಭವಾಗಿದೆ.
ಅಂದಾಜು 800 ರಿಂದ 900 ಮೀಟರ್ ರಾಜಕಾಲುವೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಕಾಟ ಮಿತಿ ಮೀರಿದೆ. ಈ ಪ್ರದೇಶದ ಸುತ್ತಮುತ್ತ ನೂರಾರು ಮನೆಗಳಿವೆ. ನಿವಾಸಿಗಳು ಕೊಳಚೆ ನೀರಿನ ದುರ್ವಾಸನೆಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ರಾಜಕಾಲುವೆ ಪಕ್ಕದಲ್ಲಿ ಕೋಟೆ ಕೆರೆಯಿದ್ದು, ಮಕ್ಕಳು ಆಟವಾಡಲು, ವೃದ್ಧರು ವಾಯುವಿಹಾರಕ್ಕೆ ಆಗಮಿಸುತ್ತಾರೆ. ಕಾಲುವೆಯಲ್ಲಿ ಕೊಳಚೆ ನೀರು ತುಂಬಿ ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಜಕಾಲುವೆಯಲ್ಲಿ ಹೂಳು ಮತ್ತು ತ್ಯಾಜ್ಯಗಳು ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಧಾರಾಕಾರವಾಗಿ ಮಳೆ ಸುರಿಯುವುದರ ಒಳಗೆ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಕೊಳಚೆ ನೀರು ಚರಂಡಿಯಿಂದ ಮೇಲೆ ಬಂದು ಕೆರೆ ಸೇರುತ್ತದೆ ಮತ್ತು ರಸ್ತೆ ತುಂಬೆಲ್ಲ ಕೊಳಚೆ ನೀರು ನಿಲ್ಲುತ್ತದೆ. ಈ ಕುರಿತು ನಗರಸಭೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂಬುದು ಸುತ್ತ್ತಲಿನ ನಿವಾಸಿಗಳ ಮನವಿ.
ರಾಜಕಾಲುವೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೇ ನಿಂತುಕೊಂಡಿದೆ. ಇದು ಸುತ್ತಮುತ್ತಲಿನ ಬಾವಿಗಳ ಮೇಲೆ ಪರಿಣಾಮ ಬೀರುತ್ತಿದೆ. ನೋಡಲು ಶುದ್ಧ ನೀರು ಕಂಡರೂ ಬಾವಿಯಿಂದ ನೀರು ತೆಗೆದರೆ ಗಬ್ಬು ವಾಸನೆಯಿಂದ ಕೂಡಿದೆ. ಈ ಪ್ರದೇಶದಲ್ಲಿ ಜಲಮೂಲ ಉತ್ತಮವಾಗಿದ್ದರೂ ಬಾವಿಯ ನೀರು ಉಪಯೋಗಕ್ಕೆ ಬಾರದಂತಾಗಿದೆ. ನಗರಸಭೆಯಿಂದ ನೀಡುವ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಶಿರಸಿ ನಗರಸಭೆ ವ್ಯಾಪ್ತಿಯ ಎಲ್ಲ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ಕಳೆದ ಬಾರಿ ಮಳೆಗಾಲದ ಸಮಯದಲ್ಲಿ ಮಳೆ ನೀರು ನುಗ್ಗಿ ಸಮಸ್ಯೆಗಳಾದ ಪ್ರದೇಶಗಳಲ್ಲೂ ಕಾಲುವೆ ಸ್ವಚ್ಛಗೊಳಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ.ಕಾಂತರಾಜ್ಪೌರಾಯುಕ್ತ ನಗರಸಭೆ ಶಿರಸಿ