ನೀರಿನ ಮೂಲ ಗುರುತಿಸದೇ ಜೆಜೆಎಂ ಕಾಮಗಾರಿ

6-SIRSI-KDP
Published on

ಶಿರಸಿ: ಜಲಜೀವನ ಮಿಷನ್ ಯೋಜನೆಯಡಿ ಅನೇಕ ಕಡೆ ನೀರಿನ ಮೂಲ ಗುರುತಿಸದೇ ಕಾಮಗಾರಿ ನಡೆಸಲಾಗಿದೆ. ಇದರಿಂದಾಗಿ ಸರ್ಕಾರದ ಹಣ ಪೋಲಾಗುವ ಸಾಧ್ಯತೆ ಇದೆ. ಅಂಥ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಿ ನೀರಿನ ಮೂಲ ಗುರುತಿಸುವ ಬಗ್ಗೆ ಮಂಗಳವಾರ ಜರುಗಿದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ರ್ಚಚಿಸಲಾಯಿತು.

ತಾಪಂ ಪ್ರಭಾರ ಇಒ ಸತೀಶ ಹೆಗಡೆ ವಿಷಯ ಪ್ರಸ್ತಾಪಿಸಿ, ಜೆಜೆಎಂ ಕಾಮಗಾರಿ ಸಂಪೂರ್ಣ ಮುಗಿದು ಎಲ್ಲ ಮನೆಗಳಿಗೂ ನೀರು ಸರಬರಾಜು ಆಗುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಬಳಿಕ ಗ್ರಾಪಂ ಸುಪರ್ದಿಗೆ ಪಡೆದುಕೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ಕುರಿತು ಇಚ್ಛಾಶಕ್ತಿ ತೋರಿಸಬೇಕಿದೆ ಎಂದರು.

ತಹಸೀಲ್ದಾರ್ ಶ್ರೀಧರ ಮುಂದಲಮನಿ ಪ್ರತಿಕ್ರಿಯಿಸಿ, ಜೆಜೆಎಂ ಕಾಮಗಾರಿಯ ಪೈಪ್ ಅಳವಡಿಸಲು ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ವಾಹನ ಅಪಘಾತ ಉಂಟಾಗುತ್ತಿದೆ. ಪೈಪ್ ಅಳವಡಿಸಿದ ನಂತರ ಸಮರ್ಪಕವಾಗಿ ದುರಸ್ತಿ ಮಾಡಬೇಕು. ಅಗೆದ ರಸ್ತೆಗಳನ್ನು ಗುತ್ತಿಗೆದಾರರ ಕಡೆಯಿಂದ ಮರು ನಿರ್ವಿುಸಲು ಆದೇಶ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್​ಗೆ ಸೂಚಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 21 ಡೆಂಘ ಪ್ರಕರಣ ದೃಢಪಟ್ಟಿದ್ದು, ಅವರೆಲ್ಲರೂ ಗುಣವಾಗಿದ್ದಾರೆ. ಆಗಸ್ಟ್​ನಿಂದ ಡೆಂಘ ಪ್ರಕರಣ ಇಳಿಮುಖವಾಗುತ್ತಿದೆ. ಬೇಧಿ ಪ್ರಕರಣ ಜಾಸ್ತಿಯಾಗುತ್ತಿದ್ದು, ಈ ವರ್ಷ 407 ಪ್ರಕರಣ ಬಂದಿದೆ. ಕಾಯಿಸಿ ಆರಿಸಿದ ನೀರು ಕುಡಿಯುವುದರಿಂದ ಬೇಧಿ ನಿಯಂತ್ರಣ ಸಾಧ್ಯ ಎಂದರು.

ಕೃಷಿ ಇಲಾಖೆ ಅಧಿಕಾರಿ ನಂದೀಶ ಸಭೆಗೆ ಮಾಹಿತಿ ನೀಡಿ, ಈ ವರ್ಷ ತಾಲೂಕಿನಲ್ಲಿ 2,921 ಮಿ.ಮೀ ವಾಡಿಕೆ ಮಳೆಯಾಗಿದೆ. 2.517 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಮುಗಿದಿದೆ. ರೈತ ಸಂಪರ್ಕ ಕೇಂದ್ರದ ಮೂಲಕ ಬಿತ್ತನೆ ಬೀಜ ವಿತರಣೆ ಮುಗಿದಿದ್ದು, 300 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. 2,119 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದರು. ತೋಟಗಾರಿಕೆ ಇಲಾಖೆ ಡಿಡಿ ಡಾ. ಬಿ.ಪಿ. ಸತೀಶ ಸಭೆ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net