

ಶಿರಸಿ: ಶಿರಸಿಹುಬ್ಬಳ್ಳಿ ಪ್ರಮುಖ ರಸ್ತೆ ಈಗ ಹೊಂಡಮಯವಾಗಿದೆ. ವಾಹನ ದಾಟಿಸಲು ಸವಾರರು ಹರಸಾಹಸ ಪಡುತ್ತಿದ್ದಾರೆ. ನಗರದ ಚಿಪಗಿ ವೃತ್ತದಿಂದ ಹೊಂಡಮಯ ರಸ್ತೆ ಆರಂಭವಾದರೆ ಜಿಲ್ಲೆಯ ಗಡಿ, ಮುಂಡಗೋಡ ತಾಲೂಕಿನ ಅರಿಶಿಣಗೇರಿ ಕ್ರಾಸ್ವರೆಗೂ ಹೊಂಡಗಳದ್ದೇ ಕಾರುಬಾರು ಆಗಿದೆ.
ಈ ರಸ್ತೆ ಶಿರಸಿಯಿಂದ ಬಿಸಲಕೊಪ್ಪ ಬಳಿಯ ದಾಸನಕೊಪ್ಪ ಕ್ರಾಸ್ವರೆಗೂ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766ಇ ಭಾಗವಾಗಿದೆ. ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ವಣದ ಜವಾಬ್ದಾರಿಯನ್ನು ಅಮ್ಮಾಪುರ ಕನ್ಸ್ಟ್ರ ಕ್ಷನ್ ವಹಿಸಿಕೊಂಡಿದೆ. ಹಾಲಿ ಈಗಿರುವ ರಸ್ತೆಯನ್ನು 12 ಮೀ.ಗೆ ವಿಸ್ತರಿಸಿ ರಾಷ್ಟ್ರೀಯ ಹೆದ್ದಾರಿ ನಿರ್ವಿುಸಬೇಕಾಗಿದೆ. ಆದರೆ, ರಸ್ತೆ ವಿಸ್ತರಣೆಗೆ ಕೆಲವೆಡೆ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಬಳಕೆ ಮಾಡಬೇಕಾಗಿದೆ. ಅರಣ್ಯ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಕಾರಣ ಗುತ್ತಿಗೆದಾರ ಕಂಪನಿ ಸಹ ಯಾವುದೇ ಕಾರ್ಯವನ್ನು ಇದುವರೆಗೂ ನಿರ್ವಹಿಸಿಲ್ಲ. ಶಿರಸಿಯಿಂದ ಬಿಸಲಕೊಪ್ಪದವರೆಗೆ ರಸ್ತೆ ಹೊಂಡ ತುಂಬುವ ಜವಾಬ್ದಾರಿ ಅಮ್ಮಾಪುರ ಕನ್ಸ್ಟ್ರಕ್ಷನ್ ಅವರದ್ದಾದರೂ ಈ ಜವಾಬ್ದಾರಿ ನಿರ್ವಹಿಸಿಲ್ಲ. ಅಲ್ಲಿಂದ ಮುಂದೆ ಅರಿಶಿಣಗೇರಿ ಕ್ರಾಸ್ವರೆಗೂ ರಸ್ತೆ ಹೊಂಡ ಬಿದ್ದು, ಬೃಹದಾಕಾರವಾಗಿ ಬೆಳೆದಿವೆ. ಇಲ್ಲಿಯ ಕಾಳೇಬೈಲ್, ಜನಗೇರಿ, ಮಳಗಿ, ಪಾಳ, ಕಾತೂರು, ಸಾಲಗಾಂವ್ ಬಳಿ ಕಾರುಗಳೇ ಹೊಂಡದಲ್ಲಿ ಸಿಕ್ಕಿ ಬೀಳುವ ಸ್ಥಿತಿ ಇದೆ. ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುತ್ತಿದೆಯೋ, ಹೊಂಡವೋ ಎಂದು ಅರಿಯದ ವಾಹನ ಚಾಲಕರು ಧಡಲ್- ಭಡಲ್ ಎಂದು ವಾಹನ ಹೊಂಡಕ್ಕೆ ಹಾರಿಸುವುದು ಸಾಮಾನ್ಯವಾಗಿದೆ.
ನಗರ ಪ್ರದೇಶದ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿಯ ಹೊಸ ಬಸ್ ನಿಲ್ದಾಣದ ಎದುರೇ ಬೃಹತ್ ಹೊಂಡ ಬಿದ್ದಿದೆ. ಗ್ರಾಮೀಣ ರಸ್ತೆಗಳಂತೂ ಕೇಳುವವರು ಇಲ್ಲದಂತಾಗಿದೆ. ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ಅವಧಿಯಲ್ಲಿ ತಾತ್ಕಾಲಿಕವಾಗಿಯಾದರೂ ರಸ್ತೆ ಹೊಂಡ ತುಂಬಿ ದುರಸ್ತಿ ಮಾಡಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.