

ಶಿರಸಿ: ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೇ ಶಂಕುಸ್ಥಾಪನೆಗೊಂಡಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಡಿಪಿಆರ್ ಈಗ ರೈಲ್ವೆ ಬೋರ್ಡ್ಗೆ ಸಲ್ಲಿಕೆಯಾಗಿದೆ. ಶೀಘ್ರವೇ ಮುಂದಿನ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾಧ್ಯಮದೊಂದಿಗೆ ಬುಧವಾರ ಮಾತನಾಡಿದ ಅವರು, ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ರೈಲ್ವೇ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕ ಎಂಬ ಕಾರಣದಿಂದ ನಾನು ಈ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಕ್ಯಾಸಲ್ರಾಕ್ ಬಳಿ ಸ್ವಲ್ಪ ಭಾಗ ಮತ್ತು ಕರಾವಳಿಯಲ್ಲಿ ಕೊಂಕಣ ರೈಲ್ವೆ ಹೊರತಾಗಿ ಜಿಲ್ಲೆಯಲ್ಲಿ ರೈಲು ಸಂಪರ್ಕ ಅಭಿವೃದ್ಧಿ ಆಗಿರಲಿಲ್ಲ. ಈಗ ತಾಳಗುಪ್ಪ- ಹುಬ್ಬಳ್ಳಿ ರೈಲ್ವೆ ಯೋಜನೆಯ ಅಂತಿಮ ಸರ್ವೆ ಕಾರ್ಯ ನಡೆಯುತ್ತಿದೆ. ಇದರ ವರದಿ ಸಹ ಶೀಘ್ರದಲ್ಲಿಯೇ ರೈಲ್ವೇ ಬೋರ್ಡ್ಗೆ ಸಲ್ಲಿಕೆ ಆಗಲಿದೆ ಎಂದರು.
ಕೊಂಕಣ ರೈಲ್ವೇ ಜಿಲ್ಲೆಯನ್ನು ಸಂರ್ಪಸಿದ್ದರೂ ಹಲವಾರು ಸಮಸ್ಯೆಗಳಿದ್ದವು. ಕುಮಟಾದಲ್ಲಿ ಒಂದು ಫ್ಲಾಟ್ಫಾರಂ ಮಾತ್ರ ಇದ್ದು, ಅಲ್ಲಿ ಎರಡು ಫ್ಲಾಟ್ ಫಾರಂ ನಿರ್ವಿುಸಲಾಗುವುದು. ಕಾರವಾರದಲ್ಲಿ ರೈಲಿಗೆ ನೀರು ತುಂಬುವ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಕೊಂಕಣ ರೈಲ್ವೆಯ ಭೂಪರಿಹಾರಗಳು ಇನ್ನೂ ಹಲವರಿಗೆ ಸಿಗಲಿಲ್ಲ. ಇರುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವ ಜತೆಗೆ ಮುಂದಿನ ಎರಡು ವರ್ಷಗಳಲ್ಲಿ ಕೊಂಕಣ ರೈಲು ವ್ಯವಸ್ಥೆಯ ಚಿತ್ರಣವೇ ಬದಲಾಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಮಸ್ಯೆಗಳಿರುವ ಸ್ಥಳದಲ್ಲಿ ನಿಂತು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಅಂಡರ್ ಪಾಸ್ಗಳ ಬೇಡಿಕೆ ಇರುವ ಸ್ಥಳದಲ್ಲಿ ನಿರ್ವಣಕ್ಕೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಶಿರಸಿ- ಕುಮಟಾ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕತಗಾಲ ಬಳಿ ಜಾಗದ ಸಮಸ್ಯೆಯಿಂದ ಅಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಶಿರಸಿ-ಹಾವೇರಿ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದ್ದು ಕಾಮಗಾರಿ ಆರಂಭವಾಗಲಿದೆ ಎಂದರು.
ಸೀಬರ್ಡ್ ನಿರಾಶ್ರಿತರಿಗೆ ಭೂ ಪರಿಹಾರ ಕೊಡಿಸುವಲ್ಲಿ ನಿರಂತರವಾಗಿ ಪರಿಶ್ರಮ ವಹಿಸಲಾಗುತ್ತಿದೆ. ಸೀಬರ್ಡ್ಗೆ ನೇಮಕಾತಿ ಪರೀಕ್ಷೆಗಳನ್ನು ಇದುವರೆಗೆ ಮುಂಬೈನಲ್ಲಿ ನಡೆಸಲಾಗುತ್ತಿತ್ತು. ಇದರಿಂದಾಗಿ ಜಿಲ್ಲೆಯ ಹೊರಗಿನ ಜನತೆಯೇ ಹೆಚ್ಚಿನ ಪ್ರಮಾಣದಲ್ಲಿ ನೇಮಕವಾಗುತ್ತಿದ್ದರು. ಮುಂದಿನ ನೇಮಕಾತಿ ಪರೀಕ್ಷೆಗಳನ್ನು ಕಾರವಾರದಲ್ಲೇ ನಡೆಸುವಂತೆ ನಿರ್ಧರಿಸಲಾಗಿದೆ. ಜಿಲ್ಲೆಯ ಅಡಕೆ ಬೆಳೆಗಾರರ ಸಮಸ್ಯೆಗೆ ಕೇಂದ್ರ ಮಟ್ಟದಲ್ಲಿ ಸ್ಪಂದನೆ ಸಿಗುವಂತೆ ಮಾಡಿದ್ದೇನೆ ಅಲ್ಲದೆ, ಬೆಳೆ ವಿಮೆ ಪರಿಹಾರ ಲಭಿಸುವಂತಾಗಿದೆ ಎಂದರು.
ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಅನಂತಮೂರ್ತಿ ಹೆಗಡೆ, ಗುರುಪ್ರಸಾದ ಹರ್ತೆಬೈಲ್, ಸದಾನಂದ ಭಟ್, ಆನಂದ ಸಾಲೇರ, ಉಷಾ ಹೆಗಡೆ, ಗಣಪತಿ ನಾಯ್ಕ, ರಾಘು ಶೆಟ್ಟಿ ಇತರರಿದ್ದರು.
ರಾಜ್ಯ ಸರ್ಕಾರದ ನಿರಾಸಕ್ತಿ
ಉತ್ತರ ಕನ್ನಡ ಜಿಲ್ಲೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಕನಸು ನನ್ನದು. ಆದರೆ, ಈ ಯೋಜನೆಗಳಿಗೆ ಸೂಕ್ತ ಜಾಗದ ಮಂಜೂರಾತಿ, ಆಗಬೇಕಾದ ಪೂರಕ ಕಾರ್ಯಗಳನ್ನು ಮಾಡಿಕೊಡಲು ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿರುವುದು ಸಮಸ್ಯೆ ಆಗಿದೆ. ಬನವಾಸಿ ಮತ್ತು ಗೋಕರ್ಣವನ್ನು ಧಾರ್ವಿುಕ ಮತ್ತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ, ರಾಷ್ಟ್ರೀಯ ಹೆದ್ದಾರಿ ನಿರ್ವಣಕ್ಕೆ ಅರಣ್ಯ ಜಾಗ ಬಿಟ್ಟುಕೊಡಲು, ಮೊಬೈಲ್ ಗೋಪುರಗಳ ನಿರ್ವಣಕ್ಕೆ ಅರಣ್ಯ ಜಾಗ ಮಂಜೂರಿ ಮಾಡಲು ರಾಜ್ಯ ಸರ್ಕಾರ ಸಮಸ್ಯೆ ಮಾಡುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ತೊಂದರೆ ಉಂಟಾಗುತ್ತಿದೆ ಎಂದು ಕಾಗೇರಿ ಹೇಳಿದರು.