ಹವ್ಯಕ ಸಮಾಜ ಸುಸಂಸ್ಕೃತ

17-SIRSI HAVYAK
Published on

ಶಿರಸಿ: ಹವ್ಯಕ ಸಮಾಜ ಸುಸಂಸ್ಕೃತ ಸಮಾಜವಾಗಿದೆ. ಇದು ತನ್ನ ಸಂಸ್ಕಾರ, ಸಂಸ್ಕೃತಿ, ಶ್ರೇಷ್ಠತೆಯನ್ನು ಹಾಗೇ ಉಳಿಸಿಕೊಂಡು ಹೋಗುವ ಜವಾಬ್ದಾರಿ ತೋರಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಹವ್ಯಕ ಶಿಕ್ಷಕರ ಸಮಾವೇಶದ ಸಮಾರೋಪದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಈ ಸಮಾಜ ಷಟ್‌ಕರ್ಮಗಳನ್ನು ನಡೆಸಿಕೊಂಡು ಬಂದಿದೆ. ಯಜನ, ಯಾಜನ, ದಾನ, ಪ್ರತಿಗ್ರಹ, ಅಧ್ಯಯನ ಹಾಗೂ ಅಧ್ಯಾಪನ ಈ ಕರ್ಮಗಳನ್ನು ಮುನ್ನಡೆಸಿಕೊಂಡ ಬಂದಿರುವ ಸುಸಂಸ್ಕೃತ ಸಮಾಜವಾಗಿದೆ ಎಂದರು.
ಆಧುನಿಕ ಶಿಕ್ಷಣದ ಗಾಳಿ ಸಿಲುಕಿ ಹವ್ಯಕ ಮಕ್ಕಳು ದಾರಿ ತಪ್ಪದಂತೆ, ನಮ್ಮತನ ಬಿಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹವ್ಯಕ ಸಮಾಜ ಹಾಗೂ ಸಮಾಜದ ಶಿಕ್ಷಕರ ಮೇಲಿದೆ. ನಮ್ಮತನ ಬಿಡುವುದು ದೊಡ್ಡತನವಲ್ಲ, ಅದು ದಡ್ಡತನವಾಗುತ್ತದೆ ಎಂದ ಶ್ರೀಗಳು ಮಕ್ಕಳಿಗೆ ಹವ್ಯಕ ಶ್ರೇಷ್ಠತೆಯನ್ನು ತಿಳಿಸುವ ಕೆಲಸ ಆಗಬೇಕು ಎಂದರು.
ಸಮಾಜದ ಸಮಸ್ಯೆಗಳ ಅರಿವು ಅಗತ್ಯವಿದೆ. ವಿವಾಹ ವಿಚ್ಛೇದನ ಸಮಸ್ಯೆ, ಜನಸಂಖ್ಯೆ ಇಳಿಮುಖದಂಥ ಸಮಸ್ಯೆಗಳ ಗಮನ ಇರಬೇಕು. ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಆಗಬೇಕು. ಇದಕ್ಕೆಲ್ಲ ಯುವಕ-ಯುವತಿಯರಿಗೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಕ್ಕಳಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸಬೇಕು. ಶಿಸ್ತಿನ ಜೀವನ ನಡೆಸಬೇಕು. ದೇಶ ಮೊದಲು ಎಂಬ ಭಾವನೆ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳಂತೆ ಶಿಕ್ಷಕರನ್ನೂ ಕ್ರಿಯಾಶೀಲಗೊಳಿಸಲು ಇಂಥ ಸಮಾವೇಶಗಳು ಕಾರಣವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕತೆ, ಬದ್ಧತೆಯಿಂದ ಕೆಲಸ ಮಾಡಬೇಕು. ಸಂಘಟಿತ ಸಂದರ್ಭದಲ್ಲಿ ಸಂಕಷ್ಟ ಎದುರಿಸಿ ಮುನ್ನಡೆಯಬೇಕು ಎಂದರು.
ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜ ಹುಟ್ಟಿದ್ದೆ ಲೋಕ ಕಲ್ಯಾಣಾರ್ಥವಾಗಿ. ನಮ್ಮ ಸಂಸ್ಕೃತಿ, ಪರಂಪರೆಗೆ ಗಟ್ಟಿತನವಿದೆ. ಯಜ್ಞ ಯಾಗವನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಜ್ಞಾನದಾಸೋಹ ಮಾಡಿಸುತ್ತಿದ್ದೇವೆ. ವಿಶೇಷ ಪಾಕ ಸಂಸ್ಕಾರ ಹೊಂದಿದೆ. ಈ ಸಮಾಜಕ್ಕೆ ಪ್ರತ್ಯೇಕ ಭಾಷೆಯೇ ಇದೆ ಎಂದರು.
ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಡಿ.ಪಿ. ಹೆಗಡೆ, ಪ್ರಶಾಂತ ಮಲವಳ್ಳಿ, ಮಹಾಬಲೇಶ್ವರ ಹೆಗಡೆ ಇದ್ದರು. ಭಾಸ್ಕರ ಗಾಂವಕರ್ ನಿರ್ವಹಿಸಿದರು.
ಇದೇ ವೇಳೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ತಮ್ಮಣ್ಣ ಬೀಗಾರ, ಜಿ.ಜಿ. ಹೆಗಡೆ ಬಾಳಗೋಡು, ಆರ್.ಎಸ್. ಹೆಗಡೆ ಭೈರುಂಬೆ, ಶ್ರೀಪಾದ ಭಟ್ಟ, ಡಿ.ಪಿ. ಹೆಗಡೆ, ಕೆ.ಎಲ್. ಭಟ್ಟ, ನಾರಾಯಣ ಭಾಗ್ವತ್, ಎನ್.ಎಸ್. ಭಟ್ಟ ಶಿಗೆಕೇರಿ, ಕೆ.ಎ. ಹೆಗಡೆ, ಸತೀಶ ಯಲ್ಲಾಪುರ, ವಿ.ಟಿ. ಹೆಗಡೆ, ಪ್ರಭಾಕರ ಭಟ್ಟ, ನಾಗಪತಿ ಹೆಗಡೆ, ಜಿ.ಎಸ್. ಭಟ್ಟ, ಎಸ್.ಎನ್. ಭಾಗ್ವತ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net