ಕಿವಿ ಸಮೀಪವೇ ಹಾದು ಹೋಯ್ತು ಗುಂಡು: ಪೆಹಲ್ಗಾಮ್‌ ದಾಳಿಯ ಭೀಕರ ಸನ್ನಿವೇಶ ಬಿಚ್ಚಿಟ್ಟ ಶಿರಸಿಯ ಕುಟುಂಬ

Palgam News
Published on

ಶಿರಸಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಶಿರಸಿಯ ಗುಬ್ಬಿಗದ್ದೆಯ ಕುಟುಂಬವೊಂದು ಬಚಾವಾಗಿ ಬಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರದೀಪ ಹೆಗಡೆ ಪ್ರತಿಭಾ ಹೆಗಡೆ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ತಮ್ಮ ಕಿವಿಯ ಬಳಿಯೇ ಗುಂಡು ಹಾದು ಹೋಯಿತು. ಕೂದಲೆಳೆ ಅಂತರದಲ್ಲಿ ನಾವು ಬಚಾವಾಗಿ ಬಂದೆವು. ಕುದುರೆ ಏರಿ ಹೋದವರು. ಕೆಸರಿನ ದಾರಿಯಲ್ಲಿ ಸುಮಾರು 7 ಕಿಮೀ ಓಡುತ್ತ ಬಂದು ತಲುಪಿದೆವು ಎಂದು ತಮ್ಮ ಭಯಾನಕ ಅನುಭವವನ್ನು ಹಂಚಿಕೊAಡಿದ್ದಾರೆ.

ನೇಸರ ಟೂರ್ಸ್ ಮೂಲಕ ಪತ್ನಿ ಶುಭಾ ಪುತ್ರ ಸಿದ್ಧಾಂತ ಜತೆ ಏ.21 ರಂದು ಕಾಶ್ಮೀರ ಶ್ರೀನಗರಕ್ಕೆ ತೆರಳಿದ್ದೆವು. ಏ.22 ರಂದು ಬೆಳಗ್ಗೆ 8 ಗಂಟೆಗೆ ಹೊರಟು 11 ಗಂಟೆಗೆಲ್ಲ ಪಹಲ್ಗಾಮ್ ತಲುಪಿದ್ದೆವು. ಅಲ್ಲಿಂದ 7 ಕಿಮೀ ದೂರದ ಬೈಸರನ್ ವ್ಯಾಲಿಗೆ ಕುದುರೆ ಮೂಲಕ ಏರಿ ಹೊರಟೆವು. ಕೆಸರಿನ ದಾರಿಯಲ್ಲಿ ಮಧ್ಯಾಹ್ನ 1.15 ಕ್ಕೆ ಮೂವರೂ ಬೈಸರನ್ ತಲುಪಿದ್ದೆವು.

ಐದು ಆರು ಎಕರೆ ವಿಸ್ತೀರ್ಣದಲ್ಲಿರುವ ಮಿನಿ ಸ್ವಡ್ಜರ್‌ಲ್ಯಾಂಡ್ ಎಂದು ಕರೆಯುವ ಬೈಸರನ್ ವ್ಯಾಲಿಗೆ ಒಂದೇ ಪ್ರವೇಶದ್ವಾರವಿದೆ. ಸುಮಾರು 1 ಗಂಟೆ ಅಲ್ಲೆಲ್ಲ ಓಡಾಡಿ, ಫೋಟೋ ತೆಗೆದುಕೊಂಡ ನಂತರ ಟಿ. ಕುಡಿಯಲು ಮ್ಯಾಗಿ ತಿನ್ನಲು ಅಲ್ಲೇ ಸಮೀಪದಲ್ಲಿರುವ ಅಂಗಡಿ ಬಳಿ ಕುಳಿತೆವು. ಏಕಾಏಕಿ ಒಮ್ಮೆ ಫೈರಿಂಗ್ ಶಬ್ದ ಕೇಳಿಸಿತು. ಅಂಗಡಿಯವನನ್ನು ಪ್ರಶ್ನಿಸಿದರೆ ಆತ ಪಟಾಕಿ ಇರಬಹುದು ಎಂದ.

ಆದರೆ, ಕೆಲವೇ ಕ್ಷಣದಲ್ಲಿ ಇವರು ಫೋಟೋ ತೆಗೆಯುತ್ತಿದ್ದ ಸ್ಥಳದಲ್ಲಿ ಇಬ್ಬರು ಗನ್ ಹಿಡಿದು ಫೈರಿಂಗ್ ಮಾಡುತ್ತ ಬರುತ್ತಿರುವುದು ಕಾಣಿಸಿತು. ಇದ್ದಕ್ಕಿದ್ದಂತೆ ಚೀರಾಟ ಶುರುವಾಯಿತು. ಒಂದು ಗುಂಡು ಪತ್ನಿ ಶುಭಾ ಪಕ್ಕದಲ್ಲೇ ಹಾದು ಹೋಯಿತು. ಗನ್ ಹಿಡಿದವರು ನಮ್ಮಿಂದ ಕೇವಲ 100 ಮೀಟರ್ ಅಂತರದಲ್ಲೇ ಇದ್ದರು.

ಅಲ್ಲಿದ್ದವರೆಲ್ಲ ಗೇಟ್ ಕಡೆ ಓಡಿ ಹೋಗಿ ಎಂದು ಹೇಳಲಾರಂಭಿಸಿದೆವು. ನಾವು ಓಡಲಾರಂಭಿಸಿದೆವು. ಶುಭಾ ನನ್ನ ಮುಂದೆ ಓಡುತ್ತಿದ್ದರೆ ನಾನು ಮಗನ ಕೈ ಹಿಡಿದುಕೊಂಡು ಓಡಲಾರಂಭಿಸಿದೆ. ನಾವು ಸುಮಾರು 6 ಕಿಮೀ ಓಡಿ ಬಂದಿರಬಹುದು. ಆಗ ನಮಗೆ ಮೂವರು ಗನ್ ಮ್ಯಾನ್‌ಗಳು ಸಿಕ್ಕರು. ಅವರು ನಿಜವಾಗಿ ಸೈನಿಕರೋ ಅಥವಾ ನಕಲಿಯೋ ಎಂದು ನಮಗೆ ಆತಂಕ ಶುರುವಾಯಿತು. ನಂತರ ಅವರು ನಮ್ಮದೇ ಭದ್ರತಾ ಸಿಬ್ಬಂದಿ ಎಂಬುದು ತಿಳಿದು ನಮ್ಮ ಆತಂಕ ದೂರವಾಯಿತು. ನಂತರ ನಾವು ಅಲ್ಲಿಂದ ಕಾರಿನಲ್ಲಿ ಶ್ರೀನಗರದತ್ತ ಹೊರಟೆವು. ನಾವು ಬರುವಾಗ ಬೈಸರನ್ ಕಡೆ ಸೈನಿಕ ಪಡೆಯೇ ಧಾವಿಸುತ್ತಿತ್ತು. ಆದರೆ, ನಂತರ ನಮಗೆ ಅದು ಭಯೋತ್ಪಾದಕ ದಾಳಿ ಎಂಬುದು ಜಾಲತಾಣಗಳ ವಿಡಿಯೋ ನೋಡಿದ ಬಳಿಕ ತಿಳಿಯಿತು ಎಂದು ಪ್ರದೀಪ ಹೆಗಡೆ ತಮ್ಮ ಅನುಭವ ಹಂಚಿಕೊAಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net