ಡೇರೆ ಹೂವಿನ ಗಿಡಗಳ ಮಾರಾಟ ಜೋರು

27-SIRSI DERE GIDA
Published on

ಶಿರಸಿ: ಮಳೆಗಾಲದ ದಿನಗಳು ಬಂತೆಂದರೆ ಹಳ್ಳಿಗಳ ಮನೆಯಂಗಳದಲ್ಲಿ ಡೇರೆ ಹೂವುಗಳ ಲೋಕವೇ ತೆರೆದುಕೊಳ್ಳುತ್ತದೆ. ಈ ದಿನಗಳಲ್ಲಿ ಡೇರೆ ಗಿಡಗಳನ್ನು ನೆಟ್ಟರೆ ಗಣೇಶ ಚತುರ್ಥಿ, ನವರಾತ್ರಿಯ ದಿನಗಳಲ್ಲಿ ಭರ್ಜರಿ ಹೂವುಗಳು ಅರಳಿ ಹಬ್ಬಗಳ ಉತ್ಸಾಹವನ್ನು ಹೆಚ್ಚಿಸುತ್ತವೆ. ಹೀಗಾಗಿ, ತಾವು ಮಾಮೂಲಿಯಾಗಿ ಬೆಳೆಯುವ ಡೇರೆ ಗಿಡಗಳ ಜತೆಗೆ ಇನ್ನೂ ತಮ್ಮಲ್ಲಿರದ, ಅಪರೂಪದ ಜಾತಿಯ ಡೇರೆ ತಂದು ನೆಡುವ ಉತ್ಸಾಹ ಮಹಿಳೆಯರಲ್ಲಿ ಮೂಡಿರುತ್ತದೆ.

ನಗರದ ಟಿಎಸ್​ಎಸ್ ಸಂಸ್ಥೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಡೇರೆ ಮೇಳ ಮಹಿಳೆಯರಿಗೆ ಉತ್ತಮ ವೇದಿಕೆ ಕಲ್ಪಿಸಿತ್ತು. ಐವತ್ತಕ್ಕೂ ಅಧಿಕ ಮಹಿಳೆಯರು ತಮ್ಮ ಮನೆಯಲ್ಲಿ ಬೆಳೆದ 80ಕ್ಕೂ ಅಧಿಕ ವೈವಿಧ್ಯದ ಡೇರೆ ಗಿಡಗಳನ್ನು ಮಾರಾಟಕ್ಕೆ ತಂದಿದ್ದರು. ಅಪರೂಪದ ಡೇರೆ ತಳಿಗಳಾದ ಬಿಳೆ ಕಡ್ಡಿ, ಅರಿಶಿಣ ಕಡ್ಡಿ, ಹಳದಿ ದೊಡ್ಡ ಡೇರೆ, ಕೇಸರಿಕೊಟ್ಟೆ, ಗಿಡ್ಡ ಕಮಲಿ, ಲಿಲ್ಲಿಪುಟ್ಟ, ಅಮೆರಿಕನ್ ಡೇರೆ ಸೇರಿ ಸ್ಥಳೀಯ ತಳಿಗಳ ಡೇರೆ ಗಿಡಗಳನ್ನು ಮಹಿಳೆಯರು ಮಾರಾಟಕ್ಕೆ ತಂದಿದ್ದರು. ಹಳ್ಳಿ ಮನೆಗಳಲ್ಲಿ ಬೆಳೆಯುವ ಈ ಡೇರೆ ಗಿಡಗಳನ್ನು ನಗರವಾಸಿಗಳೂ ಮನೆಯ ಮಹಡಿಯಲ್ಲಿ ಬೆಳೆಯಲು ಮುಗಿಬಿದ್ದು ಖರೀದಿಸಿದರು. ವ್ಯಾಪಾರಕ್ಕೆ ತಂದ ಮಹಿಳೆಯರೂ ತಮ್ಮಲ್ಲಿಲ್ಲದ ಜಾತಿಯ ಡೇರೆ ಗಿಡಗಳನ್ನು ಇತರ ಮಹಿಳೆಯರಿಂದ ಖರೀದಿಸುತ್ತಿದ್ದುದು ಕಂಡುಬಂತು.

ಸ್ವರ್ಣವಲ್ಲೀ ಮಾತೃ ಮಂಡಳಿ ಪ್ರಮುಖರಾದ ವೇದಾ ಹೆಗಡೆ ನೀರ್ನಳ್ಳಿ ಮತ್ತು ಅಂಜನಾ ಭಟ್ ಇಂತಹದೊಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಕಳೆದ 15 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿಯೂ ಇವರು ಡೇರೆ ಮೇಳೆ ಆಯೋಜಿಸುತ್ತ ಬಂದಿದ್ದಾರೆ. ಕಳೆದ 8 ವರ್ಷಗಳಿಂದ ನಗರದ ಟಿಎಸ್​ಎಸ್ ತನ್ನ ಸಂಸ್ಥೆಯ ಆವರಣದಲ್ಲಿ ಡೇರೆ ಮೇಳ ನಡೆಸಲು ಅವಕಾಶ ಮಾಡಿಕೊಡುತ್ತಿದೆ.

ಡೇರೆ ಮೇಳ ಉದ್ಘಾಟಿಸಿ ಮಾತನಾಡಿದ ಟಿಎಸ್​ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಲಾಭದ ಉದ್ದೇಶಕ್ಕಿಂತ ತಮ್ಮಲ್ಲಿರುವ ಡೇರೆ ಗಿಡಗಳನ್ನು ಉಳಿದವರೂ ಬೆಳೆಯಲಿ ಎಂಬ ಉದ್ದೇಶದಿಂದ ಮಹಿಳೆಯರು ಈ ಡೇರೆ ಮೇಳ ಆಯೋಜಿಸುತ್ತಿದ್ದಾರೆ. ಇಂತಹ ಕಾರ್ಯಕ್ಕೆ ಟಿಎಸ್​ಎಸ್ ಸಂಸ್ಥೆ ಸದಾ ಪೋ›ತ್ಸಾಹ ನೀಡುತ್ತಿದೆ ಎಂದರು.

ಅಂಜನಾ ಭಟ್ ಮಾತನಾಡಿ, ವಿವಿಧ ವರ್ಣದ ಡೇರೆ ತಳಿಗಳ ಬಗ್ಗೆ ಅಭ್ಯಸಿಸಿ ಸೂಕ್ತ ರೀತಿಯಲ್ಲಿ ಬೆಳೆದು ಮಾರಾಟಕ್ಕೆ ತರುವುದು ಮಹಿಳೆಯರಿಗೆ ಆದಾಯಕ್ಕೆ ಆಧಾರವಾಗಿದೆ. ಅನೇಕ ಮಹಿಳೆಯರು ಮನೆಯಲ್ಲಿ ಬೆಳೆದ ಡೇರೆ ಗಿಡಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು. ಟಿಎಸ್​ಎಸ್ ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಇತರರಿದ್ದರು.

ಮಳೆಯ ನಡುವೆಯೂ ಮಹಿಳೆಯರು ತಾವು ಬೆಳೆದ ಡೇರೆ ಗಿಡಗಳೊಂದಿಗೆ ಡೇರೆ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕರ ಖರೀದಿಯ ಉತ್ಸಾಹವೂ ಜೋರಾಗಿದೆ. ಡೇರೆ ಮಾತ್ರವಲ್ಲದೇ ಇನ್ನಿತರ ಅಪರೂಪದ ಗಿಡಗಳನ್ನೂ ಮಹಿಳೆಯರು ಮಾರಾಟಕ್ಕೆ ತಂದಿದ್ದಾರೆ. ಅಂಜನಾ ಭಟ್, ಸಂಘಟಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net