ರೈತರಿಗೆ ಪರಿಹಾರ ತಪ್ಪಿಸುವ ಹುನ್ನಾರ

22-SIRSI- VIME HEBBAR
Published on

ಶಿರಸಿ: ಹವಾಮಾನ ಆಧಾರಿತ ಬೆಳೆ ವಿಮೆಯ ಕಂತು ತುಂಬಿಸಿಕೊಂಡ ವಿಮಾ ಕಂಪನಿ ಮಳೆಯ ಮಾಹಿತಿ ಸರಿಯಾಗಿಲ್ಲ ಎಂಬ ಸಬೂಬು ಹೇಳಿ ರೈತರಿಗೆ ಪರಿಹಾರ ತಪ್ಪಿಸುವ ಯತ್ನ ನಡೆಸುತ್ತಿದೆ. ಜಿಲ್ಲೆಯ ಸಹಕಾರಿ ಸಂಘಗಳ ಪ್ರಮುಖರು, ಕಾನೂನು ತಜ್ಞರ ಅಭಿಪ್ರಾಯ ಪಡೆದು ವಿಮಾ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇವೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ನಗರದ ಕೆಡಿಸಿಸಿ ಬ್ಯಾಂಕ್​ನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೆಡಿಸಿಸಿ ಬ್ಯಾಂಕ್, ಉತ್ತರಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ 52 ಗ್ರಾಪಂ ವ್ಯಾಪ್ತಿಯ ರೈತರಿಗೆ ಮಾತ್ರ 10.96 ಕೋಟಿ ರೂ. ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ. ಹೆಚ್ಚು ಮಳೆಯಾಗುವ ಪ್ರದೇಶ ಮತ್ತು ಅಧಿಕ ಬೆಳೆ ಹಾನಿಯಾದ ಪ್ರದೇಶಕ್ಕೆ ಇನ್ನೂ ವಿಮಾ ಪರಿಹಾರ ನೀಡಿಲ್ಲ. ಕಳೆದ ವರ್ಷ 76 ಕೋಟಿ ರೂ. ನಮ್ಮ ಜಿಲ್ಲೆಗೆ ಬಂದಿತ್ತು. ಈ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದ ಉಳಿದ ಜಿಲ್ಲೆಯಲ್ಲಿ ವಿಮಾ ಕಂಪನಿಗಳು ಪರಿಹಾರ ವಿತರಿಸಿದ್ದರೂ ಇಲ್ಲಿ ಮಾತ್ರ ವಿಮಾ ಕಂಪನಿ ರೈತರಿಗೆ ಮೋಸ ಮಾಡಲು ಹೊರಟಂತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ದ್ವಂದ್ವ ನೀತಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ಸಿಗಬೇಕಾದ ವಿಮಾ ಪರಿಹಾರ ಮೊತ್ತ ಬಿಡುಗಡೆಗೆ ವಿಮಾ ಕಂಪನಿಯ ಜತೆ ಸಂಧಾನಕ್ಕೂ ಸಿದ್ಧ, ಸಂಘರ್ಷಕ್ಕೂ ಸಿದ್ಧರಾಗಿದ್ದೇವೆ ಎಂದರು.

ಜಿಲ್ಲಾ ಮಧ್ಯವರ್ತಿ ಬ್ಯಾಂಕ್​ನಲ್ಲಿರುವ ಹಣಕ್ಕೆ ನಾವು ಮಾಲೀಕರಲ್ಲ. ನಾವು ಅದರ ಸೇವಕರು. ಜಿಲ್ಲೆಯಲ್ಲಿ ಕೆಡಿಸಿಸಿ ಬ್ಯಾಂಕ್ 1,100 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಿದ್ದು, 550 ರಿಂದ 600 ಕೋಟಿ ರೂ. ಮಧ್ಯಮಾವಧಿ ಸಾಲ ವಿತರಣೆಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದ್ದು, ಕೃಷಿಕರಲ್ಲದವರೂ ಹಣ ಇಟ್ಟಿದ್ದಾರೆ. ಶೂನ್ಯ ಬಡ್ಡಿದರಲ್ಲಿ ಸಾಲ ಪಡೆಯುವುದು ರೈತರ ಹಕ್ಕು. ಶ್ರೀಮಂತ ರೈತರು ಶೂನ್ಯ ಬಡ್ಡಿದರಲ್ಲಿ ಸಾಲ ಪಡೆದು ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಠೇವಣಿ ಇಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಿಲ್ಲಾ ಮಧ್ಯವರ್ತಿ ಬ್ಯಾಂಕ್​ಗಳಿಗೆ ಅಗತ್ಯ ಪ್ರಮಾಣದಲ್ಲಿ ಹಣ ನೀಡದಿದ್ದರೂ ರೈತರ ಹಿತದೃಷ್ಟಿಯಿಂದ ನಮ್ಮ ಬಂಡವಾಳದಿಂದ ಸಾಲ ನೀಡುತ್ತಿದ್ದೇವೆ. ಇನ್ನೊಂದೆಡೆ ಸರ್ಕಾರಗಳು ಶೂನ್ಯ ಬಡ್ಡಿದರದ ಸಾಲದ ಪ್ರಮಾಣವನ್ನು ವಿಸ್ತರಣೆ ಮಾಡುತ್ತಿವೆ. ಈ ಹೆಚ್ಚಿನ ಸಾಲಕ್ಕೆ ಮಧ್ಯವರ್ತಿ ಬ್ಯಾಂಕ್​ಗಳೇ ಹಣ ಹೊಂದಿಸಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ ಎಂದರು.

ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಮಾತನಾಡಿ, ಜನರಿಗೆ ಸಹಕಾರ ತತ್ವ, ಸಿದ್ಧಾಂತ ಪರಿಕಲ್ಪನೆ ತಿಳಿಸಬೇಕಿರುವುದು ಅವಶ್ಯವಾಗಿದೆ. ಶಾಲಾ ಪಠ್ಯ ಪುಸ್ತಕದಲ್ಲಿ ಸಹಕಾರ ವಿಷಯ ಅಳವಡಿಸಿದರೆ ಮುಂದಿನ ದಿನಗಳಲ್ಲಿ ಸಹಕಾರ ವ್ಯವಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಅಧ್ಯಕ್ಷತೆ ವಹಿಸಿದ್ದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಶ್ರೀಪಾದ ರಾಯ್ಸದ್, ನಿರ್ದೇಶಕ ಮಹೇಂದ್ರ ಭಟ್ಟ, ಸಹಕಾರ ಸಂಘಗಳ ಉಪ ನಿಬಂಧಕ ಜಿ.ಕೆ. ಭಟ್ಟ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಶ್ರೀಕಾಂತ ಭಟ್ಟ, ಗೋಪಾಲ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net