

ಶಿರಸಿ: ನಗರಸಭೆಯ ಅವಧಿ ಈಗ ಪೂರ್ಣಗೊಂಡಿದೆ. ಕಳೆದ 14 ತಿಂಗಳ ಕಾಲ ಅಧ್ಯಕ್ಷೆಯಾಗಿ ನಾನು ನಗರದ ಅಭಿವೃದ್ಧಿಗೆ ಶ್ರಮಿಸಿದ್ದು, 10 ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದೇನೆ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಮುಖವಾಗಿ ಬೀದಿ ದೀಪ ನಿರ್ವಹಣೆಗೆ 79 ಲಕ್ಷ ರೂ., 15ನೇ ಹಣಕಾಸು ಯೋಜನೆಗಳು, ಇಂದಿರಾ ಕ್ಯಾಂಟೀನ್‌ಗೆ ನಗರಸಭೆ ಅನುದಾನವನ್ನೂ ಒಳಗೊಂಡAತೆ 45.57 ಲಕ್ಷ ರೂ., 15ನೇ ಹಣಕಾಸು ಹಾಗೂ ಎಸ್ ಎಫ್ ಸಿ ಯೋಜನೆಯಿಂದ 199 ಲಕ್ಷ ರೂ., ಸ್ಥಾಯಿ ಸಮಿತಿ ಕ್ರಿಯಾ ಯೋಜನೆಗಳಿಂದ 577 ಲಕ್ಷ ರೂ. ಅನುದಾನದ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.
ಈ ವರ್ಷ ನಗರದ ಮಾರಿಕಾಂಬಾ ಜಾತ್ರೆ ನಡೆಯಲಿದೆ. ಆದರೆ, ನಗರಸಭೆ ಆಡಳಿತ ಇಲ್ಲದಿದ್ದರೂ ನಾವು ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ ಎಂದ ಅವರು, ನಗರಸಭೆ ಚುನಾವಣೆಗೆ ಸರ್ಕಾರ ಅನಗತ್ಯ ವಿಳಂಬಮಾಡಬಾರದು. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಂತೆ ವಿಳಂಬ ಮಾಡಿದರೆ ನಗರದ ಅಭಿವೃದ್ಧಿಗೆ ತೊಂದರೆ ಆಗಲಿದೆ ಎಂದರು.
ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸದಸ್ಯರಾದ ನಾಗರಾಜ ನಾಯ್ಕ, ಕಿರಣ ಹಂದ್ರಾಳ, ಮುಕ್ತಾ ಶೆಟ್ಟಿ, ನಾಗರತ್ನ ಜೋಗಳೇಕರ್ ಇತರರಿದ್ದರು.