

ಶಿರಸಿ: ಮಲೆನಾಡಿನ ತಾಲೂಕಾದ ಶಿರಸಿ ಮತ್ತು ಸಿದ್ದಾಪುರದಲ್ಲಿ ಒಂಟಿ ಮನೆಗಳ ಸಂಖ್ಯೆ ಜಾಸ್ತಿ ಇದೆ. ಈಗಾಗಲೇ ಇರುವ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಇಲ್ಲಿಯ ಜನತೆಗೆ ಸುರಕ್ಷತೆ ಒದಗಿಸಲಾಗುವುದು ಎಂದು ಡಿವೈಎಸ್ಪಿ ಗೀತಾ ಪಾಟೀಲ ಹೇಳಿದರು.
ಇತ್ತಿಚೇಗಷ್ಟೇ ಅಧಿಕಾರ ವಹಿಸಿಕೊಂಡಿರುವ ಅವರು, ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಈಗಾಗಲೇ ಶಿರಸಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಮೊದಲು ಬೀಟ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಒಂಟಿ ಮನೆಗಳಲ್ಲಿ ಕೊಲೆಗಳಾದ ಪ್ರಕರಣಗಳೂ ಈ ಹಿಂದೆ ನಡೆದಿರುವ ಕಾರಣ ಗ್ರಾಮೀಣ ಪ್ರದೇಶ ಸುರಕ್ಷತೆಗೆ ಒತ್ತು ನೀಡಲಿದ್ದೇವೆ. ಬೀಟ್ ವ್ಯವಸ್ಥೆಯಲ್ಲಿರುವ ಪೊಲೀಸರು ಪ್ರತಿ 15 ದಿನಗಳಿಗೆ ಒಮ್ಮೆಯಾದರೂ ತಮ್ಮ ವ್ಯಾಪ್ತಿಯಲ್ಲಿ ಸಂಪೂರ್ಣ ಸಂಚರಿಸಬೇಕು. ರಾತ್ರಿ ವೇಳೆ ಸಂಶಯಾಸ್ಪದವಾಗಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಲಿದ್ದೇವೆ. ಬೀಟ್ ಜವಾಬ್ದಾರಿ ಹೊತ್ತಿರುವ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಮನೆಗಳ ಸಂಖ್ಯೆ, ಸಮೀಪದ ಆಸ್ಪತ್ರೆ, ವ್ಯಾಪ್ತಿಯಲ್ಲಿರುವ ರೌಡಿ ಶೀಟರ್ಗಳ ಮಾಹಿತಿ ಹೊಂದಿರಬೇಕು ಎಂದರು.
ಗಾಂಜಾ ಮಾರಾಟ ಮತ್ತು ಸೇವನೆಯ ಪ್ರಕರಣಗಳು ಶಿರಸಿಯಲ್ಲಿ ಜಾಸ್ತಿ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗಾಂಜಾ ಪೂರೈಕೆದಾರರು ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಾಮಾನ್ಯವಾಗಿ ಹೊರ ಜಿಲ್ಲೆಯವರೇ ಇಲ್ಲಿಯವರಿಗೆ ಗಾಂಜಾ ಪೂರೈಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಪಿ ಅವರ ಮಾರ್ಗದರ್ಶನ ಪಡೆದು ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕಾರ್ಯ ಯೋಜನೆ ಹಾಕಿಕೊಳ್ಳುತ್ತಿದ್ದೇವೆ ಎಂದ ಅವರು, ನಗರದ ಟ್ರಾಫಿಕ್ ಪೊಲೀಸ್ ಠಾಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದರು.