ವಿದ್ಯಾರ್ಥಿನಿಯರು ನಾಯಕತ್ವ ರೂಪಿಸಿಕೊಳ್ಳಲಿ: ಎಂ.ಎಂ ಫೌಂಡೇಷನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಸಲಹೆ

SirMV Day Celebration Mandya
Published on

ಮಂಡ್ಯ: ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿನಿಯರು ನಾಯಕತ್ವ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಎಂ.ಎಂ ಫೌಂಡೇಷನ್ ಅಧ್ಯಕ್ಷ, ಉದ್ಯಮಿ ಮಹಾಲಿಂಗೇಗೌಡ ಮುದ್ದನಘಟ್ಟ ಸಲಹೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನಲ್ಲಿ ಎಂ.ಎಂ ಫೌಂಡೇಷನ್, ಅಮೃತ ಲಯನ್ಸ್ ಸಂಸ್ಥೆ, ಧನ್ವಂತರಿ ಅಲಯನ್ಸ್ ಕ್ಲಬ್, ಕಾಲೇಜಿನ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಸರ್‌ಎಂವಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿನಿಯರು ಮುಂದೆ ಸುಸ್ಥಿರ ಸಮಾಜ ಕಟ್ಟುವ ರೂವಾರಿಗಳಾಗುತ್ತೀರಿ. ಶೈಕ್ಷಣಿಕ ಸಮಯವನ್ನು ಬಳಸಿಕೊಂಡು ಜ್ಞಾನವಂತರಾದರೆ ಎಲ್ಲ ಕ್ಷೇತ್ರದಲ್ಲಿ ಹೆಜ್ಜೆ ಗುರುತನ್ನು ಮೂಡಿಸಬಹುದು. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಿದೆ. ಮುಂದೆ ಲೋಕಸಭೆ ಮತ್ತು ವಿಧಾನಸಭೆಯಲ್ಲೂ ಹೆಚ್ಚಿನ ಮೀಸಲಾತಿ ದೊರಕುತ್ತದೆ. ಪರಿಣಾಮ ರಾಜ್ಯ ಹಾಗೂ ದೇಶದ ಚುಕ್ಕಾಣಿ ಹಿಡಿಯುವ ಸದಾವಕಾಶ ದೊರೆಯುತ್ತದೆ ಎಂದರು.

ಮೇಲುಕೋಟೆ ಶ್ರೀನಿವಾಸ ನರಸಿಂಹ ಗುರೂಜಿ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ಗುರುರಾಜ್ ಕೆ.ಪ್ರಭು ಅಧ್ಯಕ್ಷತೆ ವಹಿಸಿದರು. ಅಮೃತ ಲಯನ್ಸ್ ಸಂಸ್ಥೆ ಅಧ್ಯಕ್ಷ ಲೋಕೇಶ್, ಸುಜಾತಾ ಕೃಷ್ಣ, ಸಂತಾನರಾಮನ್, ಡಯಟ್ ಪ್ರಾಂಶುಪಾಲ ಯೋಗೀಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್‌ಗೌಡ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net