

ಸಿರಗುಪ್ಪ: ತಾಲೂಕಿನ ತಾಳೂರು ಗ್ರಾಮದಲ್ಲಿ ನಾಲ್ವರಿಗೆ ಕರೊನಾ ಸೋಂಕಿರುವುದು ಶನಿವಾರ ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ. ಗ್ರಾಮದ ಕಂಟೇನ್ಮೆಂಟ್ ಪ್ರದೇಶದ 52 ವರ್ಷದ ಪುರುಷ, 45 ವರ್ಷದ ಮಹಿಳೆ, 45 ವರ್ಷದ ಪುರುಷ, 24 ವರ್ಷದ ಪುರುಷಗೆ ಸೋಂಕು ದೃಢಪಟ್ಟಿದೆ. ಈವರೆಗೆ ತಾಲೂಕಿನಲ್ಲಿ 71 ಜನರಿಗೆ ಸೋಂಕು ತಗುಲಿದೆ. 35 ಜನ ಚೇತರಿಸಿಕೊಂಡಿದ್ದು, 36 ಪ್ರಕರಣ ಸಕ್ರಿಯವಾಗಿವೆ ಎಂದು ಟಿಎಚ್‌ಒ ಸುರೇಶಗೌಡ ತಿಳಿಸಿದರು.
ಕುರುಗೋಡು: ಕುಡತಿನಿ 3, 6ನೇ ವಾರ್ಡ್‌ನ ಇಬ್ಬರಿಗೆ ಹಾಗೂ ಸಿದ್ದಮ್ಮನಹಳ್ಳಿಯ ಬಸವೇಶ್ವರ ನಗರದ ಒಬ್ಬ ವ್ಯಕ್ತಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ಸೋಂಕಿತರು ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿಮ್ಸ್‌ನಿಂದ ಕಾರ್ಖಾನೆ ನೌಕರರ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಸೋಂಕಿತರ ಮನೆ ಸುತ್ತಲಿನ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ. ಸ್ಥಳಕ್ಕೆ ಪಪಂ ಮುಖ್ಯಾಧಿಕಾರಿ ಇಮಾಮ್ ಸಾಹೇಬ್, ಗ್ರಾಮಲೆಕ್ಕಾಧಿಕಾರಿ ದೊಡ್ಡಬಸಪ್ಪ ರೆಡ್ಡಿ, ಆರೋಗ್ಯ, ಆಶಾ, ಅಂಗನವಾಡಿ ಸಿಬ್ಬಂದಿ ಇದ್ದರು.