

ಸಿರಿಗೇರಿ: ಗ್ರಾಮದ ಆರಾಧ್ಯ ದೇವತೆ, ಶ್ರೀ ನಾಗನಾಥೇಶ್ವರ ಸ್ವಾಮಿಯ ತಂಗಿ ಎಂದೇ ಕರೆಯಲ್ಪಡುವ ಸಿರಿಗೇರಮ್ಮ ದೇವಿಯ ರಥೋತ್ಸವವು ರಾಮನವಮಿ ದಿನವಾದ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಲಿದೆ.
ರಥೋತ್ಸವದ ಅಂಗವಾಗಿ ಸಿರಿಗೇರಮ್ಮನ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದಿದ್ದು, ದೇವಿಗೆ ಅಲಂಕಾರ, ಕ್ಷೀರಾಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಹಾಗೂ ಭಕ್ತರು ನೈವೇದ್ಯ ಅರ್ಪಿಸಲಿದ್ದಾರೆ.
ತೆಕ್ಕಲಕೋಟೆ ಸಿರಿಗೇರಮ್ಮನ ಗಂಡನ ಮನೆ ಮತ್ತು ಸಿರಿಗೇರಿ ತವರು ಮನೆ ಆಗಿತ್ತು. ತೆಕ್ಕಲಕೋಟೆಯ ಶಿವಶರಣ ಶ್ರೀ ಕಾಡಸಿದ್ದಪ್ಪ ಅಥವಾ ಹಾಗಲೂರಪ್ಪ ಸಿರಿಗೇರಮ್ಮನ ಪತಿ ಎಂದು ಹೇಳಲಾಗುತ್ತದೆ. ಈ ಶಿವಶರಣ ತಾನು ಧರಿಸಿದ್ದ ರುಮಾಲು, ವಸ್ತ್ರಗಳನ್ನು ಬಿಟ್ಟು ಯಾರಿಗೂ ತಿಳಿಯದಂತೆ ಲೋಕ ಸಂಚಾರಕ್ಕಾಗಿ ಹೊರಡುತ್ತಾರೆ.
ರುಮಾಲು ಬಿಟ್ಟ ಸ್ಥಳದಲ್ಲೇ ಕಾಡಸಿದ್ದಪ್ಪನ ದೇವಸ್ಥಾನ ನಿರ್ಮಿಸಲಾಗಿದ್ದು, ಅಲ್ಲಿ ರುಮಾಲನ್ನು ಪೂಜಿಸಲಾಗುತ್ತಿದೆ. ಹೀಗೆ ತೆಕ್ಕಲಕೋಟೆಯಲ್ಲಿ ಅತ್ತೆ, ಮಾವ ಬೈಯುತ್ತಾರೆ ಎಂದು ಸಿರಿಗೇರಿಗೆ ಬಂದು ನೆಲೆಸಿದ ಸಿರಿಗೇರಮ್ಮ ಶರಣತ್ವ ಪಡೆದು, ಹೇಮರಡ್ಡಿ ಮಲ್ಲಮ್ಮನ ತತ್ವ ಅನುಸರಿಸುತ್ತಾ ಹಸುಗಳನ್ನು ಸಾಕಿದಳು. ಈ ಸ್ಥಳದಲ್ಲಿ ದೊಡ್ಡ ವಿಭೂತಿಗಳು ಸಿಕ್ಕಿರುವ ಪುರಾವೆಗಳಿವೆ ಎಂಬುದು ಭಕ್ತರ ನಂಬಿಕೆ.
ವ್ಯಕ್ತಿಯೊಬ್ಬನ ಮೂರು ಹಸುಗಳು ಕಾಣೆಯಾಗಿ ಮೂರು ತಿಂಗಳು ಗತಿಸಿದರೂ ಸಿಕ್ಕಿರಲಿಲ್ಲ. ಆ ವ್ಯಕ್ತಿ ಸಿರಿಗೇರಮ್ಮಳನ್ನು ಬೇಡಿಕೊಂಡಾಗ ದಾರಿಯಲ್ಲೇ ಪ್ರತ್ಯಕ್ಷವಾಗಿದ್ದವು. ಇದು ಅಮ್ಮನ ಪವಾಡ ಎಂಬುದು ಭಕ್ತಗಣದ ಮಾತು. ಹೀಗಾಗಿ ಭಕ್ತರ ಸೇವೆಯಿಂದ ಜೀರ್ಣೋದ್ಧಾರ ಮಾಡಲಾಗಿರುವ ದೇವಸ್ಥಾನದ ಗೋಪುರದಲ್ಲಿ ಗೋವಿನ ಮೂರ್ತಿಗಳಿವೆ.
ಶ್ರೀರಾಮ ನವಮಿಯಂದೇ ಜಾತ್ರೆ
ಪ್ರತಿ ಮಂಗಳವಾರ ದೇವಿಗೆ ನಡೆದುಕೊಳ್ಳುವ ಭಕ್ತರು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ದೇವಸ್ಥಾನದ ಕಮಿಟಿಯಿಂದ ಪ್ರತಿ ಅಮಾವಾಸ್ಯೆಯಂದು ಅನ್ನ ಸಂತರ್ಪಣೆ ಮಾಡಲಾಗುತ್ತದೆ. ರಾಮನವಮಿ ದಿನದಂದು ಸಿದ್ದರಾಂಪುರ ಶ್ರೀ ಕದಳೀವನದ ಮಠದ ಸಿದ್ದೇಶ್ವರ ತಾತನವರು ಅಡಿಪಾಯ ಹಾಕಿಕೊಟ್ಟ ರೀತಿಯಲ್ಲಿ ಪ್ರತೀ ವರ್ಷವೂ ರಾಮನಾಮಾಮೃತ ಮಾಡಿ ರಾಮರಸವನ್ನು ಭಕ್ತರಿಗೆ ವಿತರಿಸುವ ಪದ್ದತಿ ಈಗಲೂ ನಡೆದಿದೆ ಹಾಗೂ ರಥೋತ್ಸವವೂ ಜರುಗುತ್ತದೆ. ಈ ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ 11 ದಿನ ಶ್ರೀ ಹೇಮರಡ್ಡಿ ಮಲ್ಲಮ್ಮನ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತದೆ.
ಕೋಟ್; ಗ್ರಾಮದ ಅಧಿದೇವತೆ ಸಿರಿಗೇರಮ್ಮ ದೇವಿಗೆ ಆಪಾರ ಭಕ್ತ ಸಮೂಹ ಇದೆ. ಪುರಾಣ-ಪ್ರವಚನಗಳು, ಪವಾಡಗಳು ನಡೆದ ಪುಣ್ಯಕ್ಷೇತ್ರವಾಗಿದೆ. ತಾಯಿ ಆಶೀರ್ವಾದ, ಕೃಪೆಗೆ ಭಕ್ತರು ಪಾತ್ರರಾಗಲಿ. ಧರೆಗೆ ಉತ್ತಮ ಮಳೆ, ಬೆಳೆ ಆ ತಾಯಿ ಅನುಗ್ರಹಿಸಲಿ.
> ಗುಡಟ್ಟಿ ಈರಣ್ಣ. ಗ್ರಾ.ಪಂ ಸದಸ್ಯ, ಸಿರಿಗೇರಿ