ಪಿಎಚ್‌ಸಿಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆರಂಭಿಸಿ

Sirigeri Manavi
ಸಿರಿಗೇರಿಯಲ್ಲಿ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ರಡ್ಡಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರಮುಖರಾದ ಲಕ್ಷ್ಮಣ್ ಭಂಡಾರಿ, ವಿ.ಹನುಮೇಶ್, ಸದ್ದಾಂ ಹುಸೇನ್, ಶ್ರೀರಾಮ್, ರಾಕೇಶ್, ಉಮೇಶ್ ಇತರರಿದ್ದರು.
Published on

ಸಿರಿಗೇರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ರಡ್ಡಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮುಖಂಡ ವಿ.ಹನುಮೇಶ್ ಮಾತನಾಡಿ, ಈ ಹಿಂದೆ ಇದೇ ಪಿಎಚ್‌ಸಿಯಲ್ಲಿ ಸಿರಿಗೇರಿ, ನಡವಿ, ಮುದ್ದಟ್ಟನೂರು, ಕೊಂಚಿಗೇರಿ,ದಾಸಾಪುರ, ಗುಂಡಿಗನೂರು, ಮಾಳಾಪುರ ಗ್ರಾಮಗಳ ಮಹಿಳೆಯರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಯಶಸ್ವಿ ಮಾಡಲಾಗುತ್ತಿತ್ತು. ಆದರೆ, ಈಗ ಅಧಿಕಾರಿಗಳು ಕೊಠಡಿಗಳ ಕೊರತೆ ನೆಪದಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ ಎಂದು ತಿಳಿಸುತ್ತಿದ್ದಾರೆ. ಇದರಿಂದ ಬಾಣಂತಿಯರು ನಗರ ಪ್ರದೇಶಗಳಿಗೆ ಹೋಗುವಂತಾಗಿದ್ದು, ವೆಚ್ಚದಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಜ್ಞಾನಿ ಶೈಕ್ಷಣಿಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮಣ್ ಭಂಡಾರಿ ಮಾತನಾಡಿ, ಗ್ರಾಮದಿಂದ ನಗರ ಪ್ರದೇಶಗಳಿಗೆ ಹೋಗಬೇಕಾದರೆ 1 ಗಂಟೆ ಸಮಯ ಬೇಕು. ಅತಿ ಹೆಚ್ಚು ಬಾಣಂತಿಯರು ಆಸ್ಪತ್ರೆಗಳಿಗೆ ತೆರಳುವುದರಿಂದ ಅಲ್ಲಿ ಬೆಡ್‌ಗಳ ಸಮಸ್ಯೆ ಉಂಟಾಗಿ ಬಾಣಂತಿಯರನ್ನು ವೈದ್ಯಾಧಿಕಾರಿಗಳು ವಾಪಸ್ ಕಳಿಸುತ್ತಿರುವ ಪ್ರಸಂಗಗಳು ಎದುರಾಗಿವೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ವೈದ್ಯಾಧಿಕಾರಿ ತಿಪ್ಪೇಸ್ವಾಮಿ ರೆಡ್ಡಿ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆರಂಭಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಸದ್ದಾಂ ಹುಸೇನ್, ಶ್ರೀರಾಮ್, ರಾಕೇಶ್, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net