

ಸಿರಿಗೇರಿ: ಇಲ್ಲಿನ ಸಮೀಪದ ಮುದ್ದಟ್ಟನೂರು ಗ್ರಾಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ಜೆಜೆಎಂ ನೀರಿನ ಸದ್ಬಳಕೆ ಕುರಿತ ಶುಕ್ರವಾರ ಸಭೆ ನಡೆಯಿತು.
ಜೆಜೆಎಂನ ಜಿಲ್ಲಾ ಸಂಯೋಜಕ ಓಂಕಾರ್ ಮಾತನಾಡಿ, ಇಡೀ ದೇಶದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಮನೆಗೂ ನಳಗಳನ್ನು ಹಾಕಲಾಗಿದೆ. ನೀರು ಪೋಲಾಗದಂತೆ ನೋಡಿಕೊಳ್ಳಬೇಕಾದ ಫಲಾನುಭವಿಗಳ ಕರ್ತವ್ಯ. ನಳಗಳಿಗೆ ಅಳವಡಿಸಿದ ಮೀಟರ್‌ಗಳನ್ನು ಕಿತ್ತು ಹಾಕಬಾರದು. ಇನ್ನು ಕೆಲ ದಿನಗಳಲ್ಲಿ ಪ್ರತಿದಿನ 24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ. ಇದನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು.
ಗ್ರಾಪಂ ಪಿಡಿಒ ಬಸವರಾಜ ಕೆ ಮಾತನಾಡಿ, ಮುದ್ದಟ್ಟನೂರು ಗ್ರಾಪಂ ವ್ಯಾಪ್ತಿಯ ಸುಮಾರು ಆರು ಹಳ್ಳಿಗಳಿಗೆ ಜೆಜೆಎಂ ಯೋಜನೆ ಅಡಿ ಈಗಾಗಲೇ ನೀರು ಸರಬರಾಜು ಮಾಡಲಾಗಿದೆ. ಮನುಷ್ಯ ಅನ್ನವಿಲ್ಲದೆ ಬದುಕಬಹುದು. ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ನೀರನ್ನು ವ್ಯರ್ಥವಾಗದಂತೆ ಹಾಗೂ ಜಲ ಮೂಲ ಕಾಪಾಡಿಕೊಳ್ಳೋಣ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರಪ್ಪ, ಜೆಜೆಎಂನ ಪ್ರಮುಖರಾದ ರೂಪ, ರವಿಚಂದ್ರ, ಅಭಿ, ಗ್ರಾಪಂ ಸದಸ್ಯರಾದ ಪ್ರಭು, ಮಲ್ಲೆಪ್ಪ, ಸ್ವಸಹಾಯ ಗುಂಪಿನ ಸದಸ್ಯರಾದ ಜಲಲಮ್ಮ, ರೇಷ್ಮಾ, ಸುಮಂಗಳ, ಗ್ರಾಪಂನ ಮಲ್ಲಿಕಾರ್ಜುನ, ಅನಿತಾ, ಹನುಮಂತಮ್ಮ ಸೇರಿ ಇತರರಿದ್ದರು.