ದಲಿತರ ಕಡೆಗಣಿಸಿದರೆ ಕಾನೂನು ಕ್ರಮ: ಹಾವಿನಹಾಳು ಗ್ರಾಮದಲ್ಲಿ ಸಿಪಿಐ ಕಾಳಿಕೃಷ್ಣ ಎಚ್ಚರಿಕೆ

21022021 Sirigeri Peace meeting
Published on

ಸಿರಿಗೇರಿ: ಸಮೀಪದ ಹಾವಿನಹಾಳು ಗ್ರಾಮದಲ್ಲಿ ಕ್ಷೌರದ ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಭಾನುವಾರ ಸ್ಥಳೀಯ ಠಾಣೆ ಪೊಲೀಸರು ಶಾಂತಿ ಸಭೆ ನಡೆಸಿದರು.

ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ ಮಾತನಾಡಿ, ಹೋಟೆಲ್ ಹಾಗೂ ಕ್ಷೌರದ ಅಂಗಡಿಗಳಲ್ಲಿ ದಲಿತರನ್ನು ಕಡೆಗಣಿಸದೆ ಸಮಾನತೆ ಕಾಪಾಡಿಕೊಂಡು ಹೋಗಬೇಕೆಂದು ಈ ಹಿಂದೆ ನಡೆದ ದಲಿತ ಸಭೆಯಲ್ಲಿ ಸೂಚಿಸಲಾಗಿದೆ. ಆದಾಗ್ಯೂ ಕೆಲವರು ಗುಂಪು ಕಟ್ಟಿಕೊಂಡು ದಲಿತ ಕೇರಿಯ ವ್ಯಕ್ತಿಗೆ ಬೆದರಿಕೆ ಹಾಕಲಾಗಿದೆ ಎಂಬ ದೂರು ಬಂದಿದೆ. ಇದು ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬುದ್ಧ ಹಾಗೂ ಡಾ.ಅಂಬೇಡ್ಕರ್ ಇರುವುದು ಎರಡೇ ಜಾತಿ. ಒಂದು ಉತ್ತಮ ಚಾರಿತ್ರ್ಯ,ಇನ್ನೊಂದು ಕೆಟ್ಟ ಚಾರಿತ್ರ್ಯ, ಮಾನವ ಜಾತಿ ಒಂದೇ ಎಂದಿದ್ದಾರೆ. ಮೇಲು ಕೀಳು ಭಾವನೆ ಸರಿಯಲ್ಲ. ಎಲ್ಲರೂ ಸಮಾನತೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪಿಎಸ್‌ಐ ಅಮರೇಗೌಡ ಮಾತನಾಡಿ, ಎಲ್ಲರಿಗೂ ಒಂದೇ ನ್ಯಾಯ. ಮತ್ತೊಮ್ಮೆ ಇಂತಹ ಘಟನೆಗಳು ನಡೆದರೆ ಕಾನೂನಿನ ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ಇದಕ್ಕೆ ಗ್ರಾಮದ ಎಲ್ಲ ಸಮುದಾಯದ ಮುಖಂಡರು ಒಮ್ಮತ ಸೂಚಿದರು. ಎಎಸ್‌ಐ ಗಂಗಣ್ಣ, ಅಂಬರೀಶ್ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net