

ಸಿರಿಗೇರಿ: ಮಾಜಿ ಶಾಸಕ ಸಿ.ಎಂ.ರೇವಣಸಿದ್ದಯ್ಯಸ್ವಾಮಿ ವಿಧಾನಸಭೆಯಲ್ಲಿ ಧ್ವನಿ ಎತ್ತಿ, ತ್ವರಿತವಾಗಿ ಪರಿಹಾರ ಒದಗಿಸುತ್ತಿದ್ದ ರೈತರ ಪಾಲಿನ ಧ್ರುವತಾರೆ ಆಗಿದ್ದರು ಎಂದು ರೈತ ಹೋರಾಟಗಾರ ಮಾಧವ ರೆಡ್ಡಿ ಹೇಳಿದರು.
ಮಾಜಿ ಶಾಸಕ ಸಿ.ಎಂ.ರೇವಣಸಿದ್ದಯ್ಯ ಅವರ 14ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ರೈತರ ಸಾಲ-ಬಡ್ಡಿ ಮನ್ನಾ, ಬೆಂಬಲ ಬೆಲೆ, ನೀರಾವರಿಗೆ ಶ್ರಮಿಸಿದ ಮಹನೀಯ ರೇವಣಸಿದ್ದಯ್ಯಸ್ವಾಮಿ, ಜೀವನದುದ್ದಕ್ಕೂ ರೈತ ಹೋರಾಟಗಾರರಾಗಿ ರಾಜ್ಯದ ರೈತರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಧೀಮಂತ ನಾಯಕ ಆಗಿದ್ದಾರೆ ಎಂದರು.
ಮಾಜಿ ಶಾಸಕ ಟಿ.ಎಂ ಚಂದ್ರಶೇಖರಯ್ಯಸ್ವಾಮಿ ಮಾತನಾಡಿ, ರೇವಣಸಿದ್ದಯ್ಯಸ್ವಾಮಿ ರೈತರ ಏಳಿಗೆಗಾಗಿ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳುತ್ತ ಈ ನಾಡಿನ ರೈತರಿಗೆ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು. ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ರಾಜ್ಯ ಕಂಡ ಅಪರೂಪದ ರಾಜಕಾರಣಿ ಸಿ.ಎಂ.ರೇವಣಸಿದ್ದಯ್ಯ ಅವರ ಆದರ್ಶ ಗುಣಗಳನ್ನು ಇಂದಿನ ಶಾಸಕರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು. ಹಿರಿಯ ವಕೀಲ ಸಿದ್ದಲಿಂಗಯ್ಯ ಸ್ವಾಮಿ, ಪ್ರಮುಖರಾದ ಧರಪ್ಪ ನಾಯಕ, ಸಿ.ಎಂ.ನಾಗರಾಜ ಸ್ವಾಮಿ, ಬಿ.ಸೋಮಶೇಖರಪ್ಪ, ಕೆ.ಎಂ.ಮಲ್ಲಯ್ಯ ಸ್ವಾಮಿ, ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಎಂ.ನಾಗರಾಜ ಸ್ವಾಮಿ, ಶಾಂತನಗೌಡ, ವೈದ್ಯಾಧಿಕಾರಿ ಈರಣ್ಣ, ಜೆ.ಮಲ್ಲಿಕಾರ್ಜುನಗೌಡ, ಕೆ.ದ್ಯಾವಣ್ಣ ಇದ್ದರು.