ಕುಡಿವ ನೀರಿಗಾಗಿ ನಿತ್ಯ ಪರದಾಟ

Sirigeri water problem
ಭೈರಾಪುರ ಗ್ರಾಮದಲ್ಲಿ ನೀರು ಸಂಗ್ರಹಿಸಲು ಡಾ.ಅಂಬೇಡ್ಕರ್ ನಗರ ಜನರು ತಳ್ಳುವ ಬಂಡಿಗಳನ್ನು ಸಾಲಾಗಿ ನಿಲ್ಲಿಸಿರುವುದು.
Published on

ಭೈರಾಪುರದ ಡಾ.ಅಂಬೇಡ್ಕರ್ ನಗರ ನಿವಾಸಿಗಳಿಗೆ ತೊಂದರೆ

ಸಿರಿಗೇರಿ: ಸಮೀಪದ ಭೈರಾಪುರ ಗ್ರಾಮದ ಡಾ.ಅಂಬೇಡ್ಕರ್ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಪರದಾಡುತ್ತಿದ್ದಾರೆ.

ಅಂಬೇಡ್ಕರ್ ನಗರದಲ್ಲಿ ಸುಮಾರು 80 ರಿಂದ 100 ಮನೆಗಳಿವೆ. ಇಲ್ಲಿನ ನಿವಾಸಿಗಳು ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸ ಮತ್ತು ರೈತರಿದ್ದಾರೆ. ಕಳೆದ 10 ವರ್ಷಗಳಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ತಳ್ಳುವ ಬಂಡಿಯಲ್ಲಿ ಆರೆಂಟು ಕೊಡಗಳೊಂದಿಗೆ ದೂರದ ಮಾರೆಮ್ಮನ ದೇವಸ್ಥಾನ ಬಳಿ ಇರುವ ಬೋರ್‌ವೆಲ್‌ಗೆ ತೆರಳಿ ನೀರು ಸಂಗ್ರಹಿಸುವುದು ನಿತ್ಯ ಕಾಯಕವಾಗಿದೆ. ಬೋರ್‌ವೆಲ್‌ನ ನೀರೇ ಆಸರೆಯಾಗಿದೆ.

ಕರೆಂಟ್ ಕೈಕೊಟ್ಟರೆ ನಿವಾಸಿಗಳ ಪರಿಸ್ಥಿತಿ ಹೇಳತೀರದು. ಅಂಬೇಡರ್ ನಗರದ ಹತ್ತಿರವೇ ಕುಡಿವ ನೀರಿನ ಟ್ಯಾಂಕ್ ನಿರ್ಮಿಸಿ ಬೋರ್‌ವೆಲ್ ಸಹ ಕೊರೆಸಲಾಗಿದೆ. ಆದರೆ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಟ್ಯಾಂಕ್‌ಗೆ ನೀರನ್ನು ಬಿಡುತ್ತಿಲ್ಲ ಎನ್ನುತ್ತಾರೆ ಗ್ರಾಪಂ ಅಧಿಕಾರಿಗಳು. ಶಾಶ್ವತವಾಗಿ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನೆಮನೆಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾಪಂ ಮುಂದಾಗಿದ್ದರೂ ಜನರು ನಳದ ಸಂಪರ್ಕ ಪಡೆಯುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಮಾರೆಮ್ಮ ಗುಡಿ ಹತ್ತಿರ ಇರುವ ಬೋರ್‌ವೆಲ್ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅರ್ಜಿ ಸಲ್ಲಿಸಿದರೆ ಪ್ರತಿ ಮನೆ ಬಳಿ ನಳ ಅಳವಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು.
| ಲೀಲಾವತಿ ಬಂಡೂರ ಪಿಡಿಒ, ಭೈರಾಪುರ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net