

ಸಿರಿಗೆರೆ: ರಾಜ್ಯದಲ್ಲಿ ವಜಾಗೊಂಡ ಸಾರಿಗೆ ನೌಕರರ ಪುನರ್ ನೇಮಕ ಮತ್ತು ನೌಕರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕೋರಿ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮೊರೆ ಹೋಗಿದ್ದಾರೆ.
ಸಿರಿಗೆರೆಯ ತರಳಬಾಳು ಸದ್ಧರ್ಮ ಬೃಹನ್ಮಠ ನ್ಯಾಯ ಪೀಠವಾಗಿದ್ದು, ಅನೇಕರ ಜಟಿಲ ಸಮಸ್ಯೆಗಳಿಗೆ ಶ್ರೀಗಳು ಪರಿಹಾರ ತೋರಿ ಸಾಮಾಜಿಕ ನ್ಯಾಯಾಧೀಶರ ಸ್ಥಾನದಲ್ಲಿದ್ದಾರೆ. ನಮ್ಮ ಸಮಸ್ಯೆಗೂ ಸ್ವಾಮೀಜಿ ಸರ್ಕಾರ ಮತ್ತು ನೌಕರರ ಮಧ್ಯೆ ಸೇತುವೆಯಾಗಬೇಕು ಎಂದು ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಸಂಜೆ ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಶ್ರೀಗಳು, ಸರ್ಕಾರದ ಜತೆ ಮಾತನಾಡಲು ಯಾವುದೇ ಸಂಕೋಚ ಇಲ್ಲ. ಆದರೆ ಇದು ಸುಲಭವಾಗಿ ಆಗುವ ಕೆಲಸವಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಸಮಾನವಾದ ವೇತನ ನೀಡಲು ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಹೇಳಿದರು.
ಸಾರಿಗೆ ನೌಕರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೈ ಬಿಡಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ. ಇದರಿಂದ ನೌಕರರಿಗೆ ಮಾನಸಿಕ ನೆಮ್ಮದ ಸಿಗುತ್ತದೆ ಎಂದು ತಿಳಿಸಿದರು.
ಸಾರಿಗೆ ನೌಕರರ ವಿಷಯ ಕಾನೂನು ಹೋರಾಟವಾಗಬಾರದು. ಮಾನವೀಯತೆ ಮೇಲೆ ಕ್ರಮ ಆಗಬೇಕು. ಈ ಬಗ್ಗೆ ಸರ್ಕಾರದ ಅಧಿಕಾರಸ್ಥರ ಜತೆ ಖಾಸಗಿಯಾಗಿ ಮಾತನಾಡುತ್ತೇವೆ ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೌಕರರಿಗೆ ಭರವಸೆ ನೀಡಿದರು.
ಈ ವೇಳೆ ನೌಕರರ ಕೂಟದ ಪ್ರಧಾನ ಕಾರ್ಯದರ್ಶಿ ಕೆ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.
ಸಾರಿಗೆ ನೌಕರರ ರಕ್ಷಣೆಗೆ ಮೊರೆ:
ರಾಜ್ಯದಲ್ಲಿ ಸಾರಿಗೆ ನೌಕರರು ಸರ್ಕಾರದ ಉದ್ಯೋಗಿಗಳಿಗಿಂತ ಹೆಚ್ಚು ಕೆಲಸ ಮಾಡಿದರೂ ಶೇ.40ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಮುಷ್ಕರದ ನಂತರ 2,500 ನೌಕರರು ವಜಾ ಹಾಗೂ 3,200 ನೌಕರರು ವರ್ಗಾವಣೆ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ನೌಕರರ ಕುಟುಂಬಗಳನ್ನು ಕಾಪಾಡಿ ಎಂದು ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ತರಳಬಾಳು ಜಗದ್ಗುರುಗಳಲ್ಲಿ ಮೊರೆಯಿಟ್ಟರು.