

ಸಿರಿಗೆರೆ: ಗ್ರಾಮದ ಬೃಹನ್ಮಠದಲ್ಲಿ ಸೆ.20 ರಿಂದ 24 ರವರೆಗೆ ತರಳಬಾಳು ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 32ನೇ ಶ್ರದ್ಧಾಂಜಲಿ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಠದಲ್ಲಿ ಈಚೆಗೆ ಆಯೋಜಿಸಿದ್ದ ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರದ್ಧಾಂಜಲಿ ಅಂಗವಾಗಿ ಐದು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತರಳಬಾಳು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ, ವಿದೇಶಿಗಳಿಗೆ ತೆರಳಿ ವಿಶಿಷ್ಟ ಸಾಧನೆ ಮಾಡಿರುವ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು ಎಂದರು.
ಆರೋಗ್ಯ ತಪಾಸಣೆ, ನೇತ್ರ ಪರೀಕ್ಷೆ, ರಕ್ತದಾನ ಶಿಬಿರವನ್ನು ಆಯೋಜಿಸಲಾಗುವುದು. ಸಮಾರಂಭಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ತುಮ್ಕೋಸ್ ಸಂಸ್ಥೆ ದಾಸೋಹ ವ್ಯವಸ್ಥೆ ಒದಗಿಸಲಿದೆ. ಸುತ್ತಮುತ್ತಲಿನ ಗ್ರಾಮದ ಭಕ್ತರು ಅಕ್ಕಿ, ಬೇಳೆ, ಬೆಲ್ಲ, ತರಕಾರಿ ನೀಡಲಿದ್ದಾರೆ. ಎಲ್ಲ ಆಹಾರ ಸಾಮಗ್ರಿಗಳು ಸೆ.22ರೊಳಗೆ ಮಠಕ್ಕೆ ತಲುಪಿಸಬೇಕು ಎಂದು ತಿಳಿಸಿದರು.
ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ, ಕೆ.ಮಂಜುನಾಥ್, ತರಳಬಾಳು ಕೃಷಿ ಸಮಿತಿಯ ಸಿ.ಆರ್.ಬಸವರಾಜಯ್ಯ, ನಾಗರಾಜ್, ವಿಶ್ವಬಂಧು ಬ್ಯಾಂಕ್ ಅಧ್ಯಕ್ಷ ತೀರ್ಥಪ್ಪ, ವಿಪ್ರೋ ನಿರ್ದೇಶಕ ಮಂಜುನಾಥ್ ಕೊಗುಂಡೆ, ದ್ಯಾಮಪ್ಪ ಇತರರಿದ್ದರು.