ಆರನೇ ಗ್ಯಾರಂಟಿ ಕೇಳಿದ ಸಿರಿಗೆರೆ ಸ್ವಾಮೀಜಿ

SIRIGERE SWAMIJ
Published on

ಸಿರಿಗೆರೆ: ಕೃಷಿ ಕ್ಷೇತ್ರಕ್ಕೆ ನೀರು ಪೂರೈಸುವ 6ನೇ ಗ್ಯಾರಂಟಿಯನ್ನು ರಾಜ್ಯ ಸರ್ಕಾರ ಘೋಷಿಸಬೇಕು ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಸೆ ವ್ಯಕ್ತಪಡಿಸಿದರು.

ಗ್ರಾಮದ ಗುರುಶಾಂತೇಶ್ವರ ಭವನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 31ನೇ ವರ್ಷದ ಶ್ರದ್ಧಾಂಜಲಿಯ 4ನೇ ದಿನದ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಹಿರಿಯ ಗುರುಗಳು ಕಾಲ ಮತ್ತು ಕಾಸಿಗೆ ಬೆಲೆ ನೀಡುತ್ತಿದ್ದರು. ಜತೆಗೆ ಗ್ರಾಮೀಣ ಜನರ ಕೆಲಸಕ್ಕೆ ಆದ್ಯತೆ ಕೊಡುತ್ತಿದ್ದರು. ಅದೇ ರೀತಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹರಿಸುವಲ್ಲಿ ಮುಂದಾಗುವ ಸರ್ಕಾರಕ್ಕೆ ಬೆಂಬಲ ಇರಲಿದೆ ಎಂದರು.

ಜಗಳೂರು ತರಳಬಾಳು ಹುಣ್ಣಿಮೆ ಸಂದರ್ಭ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಅಧಿವೇಶನದಲ್ಲಿ 500 ಕೋಟಿ ರೂ. ಮಂಜೂರು ಆದೇಶ ಹೊರಡಿಸಿದ್ದರು. ಅದರ ಪರಿಣಾಮ ಇಂದು ಈ ಭಾಗದಲ್ಲಿ ಬರದ ಛಾಯೆ ಇದ್ದರೂ ಕೆರೆಗಳು ಮೈದುಂಬಿವೆ. ಜತೆಗೆ ತುಪ್ಪದಹಳ್ಳಿ, ಕಾತ್ರಾಳ್ ಕೆರೆಗಳಿಗೆ ನೀರು ಹರಿಸಲಾಗಿದೆ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕಠಿಣವಾದ ಕಾಲದಲ್ಲಿ ಲಿಂಗೈಕ್ಯ ಸ್ವಾಮಿಗಳು ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದಾರೆ. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಬಸವಣ್ಣನ ಆದರ್ಶಗಳನ್ನು ತರಳಬಾಳು ಮಠ ತನ್ನ ಕಾರ್ಯದಲ್ಲಿ ಅಳವಡಿಸಿಕೊಂಡಿದೆ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೇ.25ರಷ್ಟು ಕೆಲಸ ಆಗಿಲ್ಲ. ಆದರೆ, ಶ್ರೀಗಳ ಇಚ್ಛಾಶಕ್ತಿ ಫಲ ಏತನೀರಾವರಿ ಯೋಜನೆ ಜಾರಿಗೊಂಡು ಈ ಪ್ರದೇಶದಲ್ಲಿನ ಕೆರೆಗಳು ಮೈದುಂಬಿವೆ ಎಂದರು.

ಸಚಿವ ಎಚ್.ಡಿ.ತಮ್ಮಯ್ಯ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ, ಸಾಧು ಸಧರ್ಮ ಸಮಾಜದ ಅಧ್ಯಕ್ಷ ಎಸ್.ಆರ್.ಬಸವರಾಜಪ್ಪ, ತರಳಬಾಳು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ. ಎಸ್.ಪಿ.ರಂಗನಾಥ್, ಆಡಳಿತಾಧಿಕಾರಿ ವಾಮದೇವಪ್ಪ ಇದ್ದರು.

ತರಳಬಾಳು ಕಲಾ ಸಂಘದ ಮಕ್ಕಳು ಪ್ರದರ್ಶಿಸಿದ ಮಲ್ಲಿಹಗ್ಗ ನೃತ್ಯ ಕಣ್ಮನ ಸೆಳೆಯಿತು.

ರೈತರ ಸಮಾವೇಶ: ಭಾನುವಾರ ಬೆಳಗ್ಗೆ 5 ಗಂಟೆಗೆ ಐಕ್ಯ ಮಂಟಪದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ. 9.30ಕ್ಕೆ ಶ್ರೀಗಳಿಂದ ಭಕ್ತಿ ಸಮರ್ಪಣೆ, 10 ಗಂಟೆಗೆ ಕುಂಭಮೇಳ ಸ್ವಾಗತ, 10.30ಕ್ಕೆ ಶಿವಧ್ವಜಾರೋಹಣ.

ಬೆಳಗ್ಗೆ 11 ಗಂಟೆಗೆ ರೈತರ ಸಮಾವೇಶ. ಸಾನ್ನಿಧ್ಯ-ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಅಧ್ಯಕ್ಷತೆ-ಶಾಸಕ ಶಾಮನೂರು ಶಿವಶಂಕರಪ್ಪ. ಗುರುವಂದನೆ-ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ. ಮುಖ್ಯ ಅತಿಥಿಗಳು-ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ಎಚ್.ಆಂಜನೇಯ, ಸಭಾಪತಿ ಬಸವರಾಜ್ ಹೊರಟ್ಟಿ, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಬಿ.ವೈ.ವಿಜಯೇಂದ್ರ, ಯುಬಿ ಬಣಕಾರ್, ಡಿ.ಜೆ.ಶಾಂತನಗೌಡ. ಬಿಸಿಲು ಬೆಳದಿಂಗಳು ಕೃತಿ ಬಿಡುಗಡೆ ಇದೇ ವೇಳೆ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net