

ಸಿರಿಗೆರೆ: ಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಅಭಾವ ತಲೆದೋರಿದೆ. ಗ್ರಾಮಸ್ಥರು ರಾತ್ರಿಯಿಡೀ ಗಾಡಿಗಳನ್ನು ಇಟ್ಟು ನೀರಿನ ಸರತಿಗಾಗಿ ಕಾಯುವ ಸ್ಥಿತಿಯಲ್ಲಿದ್ದಾರೆ.
ಸತತ ಐದು ವರ್ಷಗಳ ಕಾಲ ಕುಡಿವ ನೀರಿಗಾಗಿ ಹೆಂಗಳೆಯರು, ಮಕ್ಕಳು ಸುಮಾರು ಮೂರು ಕಿಲೋಮೀಟರ್‌ಗಟ್ಟ್ಟಲೇ ದೂರ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ನೀರು ತರಬೇಕೆಂದರೂ ಕರಡಿ-ಚಿರತೆ ಭೀತಿಯಿಂದಾಗಿ ಮನೆ ಹೊರಗೆ ಕಾಲಿಡಲು ಹೆದರುತ್ತಿದ್ದಾರೆ.
ಅಂತರ್ಜಲ ಕುಸಿದಿದ್ದರಿಂದ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳು, ಶಾಸಕರ ಪರಿಶ್ರಮದಿಂದ ಸುಮಾರು ಸಾವಿರಾರು ಅಡಿ ಆಳಕ್ಕೆ ಬೋರ್‌ವೆಲ್ ಕೊರೆಸಿದ್ದರೂ ನೀರು ಕಾಣದಾಗಿದ್ದು, ಹಾಹಾಕಾರ ಹೆಚ್ಚಿದೆ. ಬಿರುಬಿಸಿಲಿನಲ್ಲಿ ಜನರ ಜತೆಯಲ್ಲೇ ದನಕರುಗಳ ದಾಹಕ್ಕೂ ಪರಿತಪಿಸಬೇಕಾಗಿದೆ. ಈ ವರ್ಷದಲ್ಲಿ ಆರು ಕೊಳವೆಬಾವಿ ಕೊರೆಸಿದ್ದರೂ ನೀರು ದಕ್ಕಿಲ್ಲ.
ಹೀಗಾಗಿ, ಕರೊನಾದಿಂದಾದ ಲಾಕ್‌ಡೌನ್ ಮುಗಿದ ನಂತರದಲ್ಲಿ ಸಿರಿಗೆರೆಯಿಂದ ಚಿಕ್ಕೇನಹಳ್ಳಿ, ಕೋಣನೂರು ಹಾಗೂ ಬೊಮ್ಮವ್ವನಾಗತಿಹಳ್ಳಿ ಗ್ರಾಮದ ಜನರಿಗೆ ಸೂಳೆಕೆರೆ ನೀರು ಸರಬರಾಜು ಮಾಡಿಸಿಕೊಡಲು ಜಿಲ್ಲಾಡಳಿತ ಹಾಗೂ ತರಳಬಾಳು ಜಗದ್ಗುರುಗಳು ಮುಂದಾಗಬೇಕೆಂದು ಗ್ರಾಮಸ್ಥರು ಒಕ್ಕೊರಲ ಆಗ್ರಹ ಮಾಡಿದ್ದಾರೆ.
ಚಿಕ್ಕೇನಹಳ್ಳಿಯ ಗ್ರಾಮಸ್ಥರಾದ ಗೌಡರ ಮಹದೇವಪ್ಪ , ತಾಪಂ ಸದಸ್ಯೆ ಸುಧಾ ಮಹಾಂತೇಶ್, ಗ್ರಾಪಂ ಸದಸ್ಯರಾದ ಸುಧಾ ಮಾರುತೇಶ್, ನಿಂಗಪ್ಪ, ಒ.ನಾಗರಾಜ, ಮಂಜಪ್ಪ ಹಾಗೂ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಲ್ಲೂ ಈ ಬಗ್ಗೆ ಮನವಿ ಮಾಡಿದ್ದಾರೆ.