

ಚಿತ್ರದುರ್ಗ: ಲಿಂಗೈಕ್ಯ ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣನಾಗಿದ್ದವರು. ಸ್ವಾತಂತ್ರೃಪೂರ್ವದಲ್ಲೇ ಶಿಕ್ಷಣ, ಸಮ ಸಮಾಜ ವಿಷಯದಲ್ಲಿ ಕ್ರಾಂತಿ ಮಾಡಿದ ಮಹಾಪುರುಷ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.
ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರೋಪ ಸಮಾರಂಭ ಹಾಗೂ ರೈತರ ಸಮಾವೇಶದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಶಿಕ್ಷಣ, ಸಮಾನತೆ ಹಕ್ಕಿಗಾಗಿ ಸಂಘಟನೆಯ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ. ಹೋರಾಟಕ್ಕೆ ಸಜ್ಜಾಗಲು ಶಿಕ್ಷಣದ ಅಗತ್ಯವಿದೆ. ಈ ಕಾರ್ಯವನ್ನು ಸ್ವಾತಂತ್ರೃ ಪೂರ್ವದಲ್ಲಿಯೇ ಹಿರಿಯ ಗುರುಗಳು ಮಾಡಲು ಶ್ರಮಿಸಿದ್ದಾರೆ ಎಂದರು.
ಸಿರಿಗೆರೆ ಮಠವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಡಾಕ್ಟರ್ ಸ್ವಾಮೀಜಿಗೆ ಸಲ್ಲುತ್ತದೆ. ಮಠಕ್ಕೆ ಮೆಡಿಕಲ್ ಕಾಲೇಜು ಬೇಡ ಎಂದು ಶ್ರೀಗಳು ಹಲವು ಬಾರಿ ಸರ್ಕಾರಕ್ಕೆ ತಿಳಿಸಿದ್ದು, ಈ ಮೂಲಕ ಮಠದ ಆಶಯ ಪ್ರಾಥಮಿಕ, ಪ್ರೌಢಶಾಲೆಗಳ ಸ್ಥಾಪನೆ ಎಂಬ ಸಂದೇಶ ರವಾನಿಸಿದ್ದಾರೆ ಎಂದರು.