ಕರೊನಾ ತಡೆಗೆ ಸಿರಿಗೆರೆ ಶ್ರೀ ಮಾರ್ಗಸೂಚಿ

SIRIGERE SWAMIJI
Published on

ಸಿರಿಗೆರೆ: ಲಾಕ್‌ಡೌನ್ ಕಾರಣ ಮನೆಯೊಳಗಿರುವ ನಾಗರಿಕರು ಮತ್ತು ರೈತರ ಅನುಕೂಲಕ್ಕಾಗಿ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಲ ಸಲಹೆ ನೀಡಿದ್ದಾರೆ.

ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ರಾಜ್ಯದ ಎಲ್ಲ ಮಾರುಕಟ್ಟೆಗಳನ್ನು ಬಂದ್ ಮಾಡಬೇಕು. ನೇರ ಮನೆ ಬಾಗಿಲಿಗೆ ಹಾಲು, ತರಕಾರಿ, ಹಣ್ಣು, ಆಹಾರ ಇತರ ಅಗತ್ಯ ವಸ್ತು ಪೂರೈಕೆಗೆ ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು.

ಸ್ಥಳೀಯ ಆಡಳಿತಗಳು ರೈತರಿಗೆ, ಮಾರಾಟಗಾರರಿಗೆ ತರಕಾರಿ, ಹಾಲು ಹಾಗೂ ಆಹಾರ ಸಾಮಗ್ರಿ ಸಾಗಿಸಲು ಬಸ್ಸುಗಳ ಸೌಲಭ್ಯ ಕಲ್ಪಿಸಿ ಮಾರಾಟಕ್ಕೆ ಅನುವು ಮಾಡಿಕೊಡಬೇಕು.

ಕೊಳೆಗೇರಿ ನಿವಾಸಿಗಳು ಮತ್ತು ದಿನಗೂಲಿ ಕಾರ್ಮಿಕರನ್ನು ಹೊರತುಪಡಿಸಿ ಯಾರಿಗೂ ಏನನ್ನೂ ಉಚಿತವಾಗಿ ನೀಡಬಾರದು. ಜನ ಗುಂಪು ಸೇರುವುದನ್ನು ತಡೆಯಲು ಪ್ರತಿ ಬಡಾವಣೆಗಳಿಗೆ ಬಸ್ ಮೂಲಕವೇ ತೆರಳಿ ಸರತಿ ಸಾಲಿನಂತೆ ಹಾಲು, ತರಕಾರಿ, ಆಹಾರ ಸಾಮಗ್ರಿ ಪೂರೈಕೆ ಮಾಡಬೇಕು.

ಮಾರಾಟಗಾರರು ಬಸ್ಸಿನ ಮೆಟ್ಟಿಲು ಅಥವಾ ಬಸ್ ಪಕ್ಕದಲ್ಲಿ ಪದಾರ್ಥಗಳನ್ನು ಇಟ್ಟುಕೊಂಡು ವಿತರಣೆ ಮಾಡುವಂತೆ ಸೂಚಿಸಬೇಕು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೂರ ದೂರದಲ್ಲಿ ವೃತ್ತ ಬರೆದು ಅದರಲ್ಲೇ ನಿಲ್ಲುವ ವ್ಯವಸ್ಥೆ ಮಾಡಬೇಕು.

ಈ ಮಾರ್ಗಸೂಚಿಗಳನ್ನು ಅನುಸರಿಸಿದರೆ ಮಾತ್ರ ನಿಗದಿತ ಅವಧಿಯಲ್ಲಿ ಕರೊನಾ ತಡೆ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net