

ಸಿರಿಗೆರೆ: ತಾಯಿ ಗರ್ಭದಿಂದ ಹೊರ ಪ್ರಪಂಚಕ್ಕೆ ಕಾಲಿಟ್ಟ ಶಿಶು ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಿರುಚಾಡುತ್ತದೆ. ಈ ವೇಳೆ ತಾಯಿಯು ಶಿಶುವನ್ನು ದೇಹಕ್ಕೆ ತಾಗುವಂತೆ (ಕಾಂಗರು ವಿಧಾನದಲ್ಲಿ) ಇಟ್ಟುಕೊಳ್ಳುವುದರಿಂದ ಅಳು ನಿಲ್ಲಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ತಿಳಿಸಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ನವಜಾತ ಶಿಶುವಿನ ಆರೈಕೆ ಕುರಿತು ಮಾತನಾಡಿ, 108 ವಾಹನ ಸೌಲಭ್ಯ ಪಡೆದು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು. ಮಗು ಜನಿಸಿದ ಅರ್ಧ ಗಂಟೆ ಒಳಗಡೆ ಎದೆಹಾಲುಣಿಸಬೇಕು. ಈ ಪ್ರಕ್ರಿಯೆ ಆರು ತಿಂಗಳ ತನಕ ಮುಂದುವರಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್.ಮಂಜುನಾಥ್ ಮಾತನಾಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಬಹುಮುಖ್ಯ ಎಂದರು.
ಗರ್ಭಕೋಶದ ತೊಂದರೆ, ರಕ್ತದೊತ್ತಡ, ಮಧುಮೇಹ, ಸಿಜೇರಿಯನ್ ಆದವರು ಮಗು ಬೇಡವೆಂದು ನಿರ್ಧರಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ತೊಂದರೆ ಹೆಚ್ಚು. ಹೀಗಾಗಿ ಗಂಡಂದಿರು ಸರಳ ವಿಧಾನವಾದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇದರಿಂದ ಪುರುಷತ್ವಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.
ಜನನಿ ಸುರಕ್ಷಾ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕುರಿತು ಮಾಹಿತಿ ನೀಡಲಾಯಿತು.
ಡಾ.ಗಣೇಶ್ ಪ್ರಸಾದ್, ಸುಶ್ರೂಕಿಯರಾದ ಉಮಾದೇವಿ, ಶಾಮಲಾ, ಆಶಾ ಕಾರ್ಯಕರ್ತೆಯರಾದ ವನಜಾಕ್ಷಮ್ಮ, ಉಮಾದೇವಿ, ಆಸ್ಪತ್ರೆ ಸಿಬ್ಬಂದಿ ನಿರಂಜನ್, ಮಂಜುಳಾ, ಅಜಯ್, ರತ್ನಾ ಇದ್ದರು.