

ಸಿರಿಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ನೀರನ್ನು ದೊಡ್ಡಾಲಘಟ್ಟ ಓವರ್ ಟ್ಯಾಂಕ್ ಮೂಲಕ ಚಿಕ್ಕೇನಹಳ್ಳಿ ಗ್ರಾಮಕ್ಕೆ ತರಲು ಶೀಘ್ರದಲ್ಲೇ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.
ಸಮೀಪದ ಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2020- 21ನೇ ಸಾಲಿನಲ್ಲಿ ಮಂಜೂರಾದ ಚಿತ್ರದುರ್ಗ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿರ್ಮಿಸಿದ 2 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಗೆ ಇನ್ನೂ 2 ಕೊಠಡಿಗಳನ್ನು ಮಂಜೂರು ಮಾಡಲಾಗುವುದು. ಬೊಮ್ಮೇನಹಳ್ಳಿಯಿಂದ ಚಿಕ್ಕೇನಹಳ್ಳಿವರೆಗೂ ಅರ್ಧಕ್ಕೇ ನಿಂತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಮಕ್ಕಳ ಕಂಪ್ಯೂಟರ್ ಕಲಿಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ರಥ ನಿಲ್ಲಿಸಲು ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟರು. ಇದಕ್ಕೆ ಶಾಸಕರು 4 ಲಕ್ಷ ರೂ. ನೀಡುವ ಭರವಸೆ ನೀಡಿದರು.
ಬಿಜೆಪಿ ಮಂಡಲ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಬಿ.ಮಂಜಪ್ಪ, ಗ್ರಾಮಸ್ಥರಾದ ಗೌಡ್ರ ಮಹಾದೇವಪ್ಪ, ಮುಸ್ಟೂರಪ್ಪ, ಮುಖ್ಯ ಶಿಕ್ಷಕರ ಚಂದ್ರಪ್ಪ, ಸಿರಿಗೆರೆ ಮಾಜಿ ಗ್ರಾಪಂ ಅಧ್ಯಕ್ಷ ಕೆಎನ್‌ಬಿ ಮೋಹನ್, ಪೆಟ್ರೋಲ್ ಬಸವರಾಜ್ ಇತರರಿದ್ದರು.
ಶಾಲೆಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ 2 ಕೊಠಡಿ ಮತ್ತು 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದರು.