

ಸಿರಿಗೆರೆ: ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭ ಸೆ.20 ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನ್ಯಾಯ ಪೀಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಐದು ದಿನಗಳ ಕಾಲ ಸಮಾರಂಭ ನಡೆಯಲಿದ್ದು,
ಕೊನೆಯ ದಿನವಾದ ಸೆ.24ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದರು.
ತರಳಬಾಳು ವಿದ್ಯಾ ಸಂಸ್ಥೆಯ ಹಳೇ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರ ಸಮಾವೇಶವು ನಡೆಯಲಿದ್ದು, ವಿಶಿಷ್ಟ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.
ಆರೋಗ್ಯ ತಪಾಸಣೆ, ಉಚಿತ ನೇತ್ರ ಪರೀಕ್ಷೆ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಚನ್ನಗಿರಿಯ ತುಮ್ಕೋಸ್ ಸಂಸ್ಥೆಯಿಂದ ಈ ಬಾರಿಯೂ ಒಂದು ಲಕ್ಷ ಲಾಡು ಉಂಡೆಗಳನ್ನು ದಾಸೋಹಕ್ಕೆ ನೀಡಲಾಗುತ್ತಿದೆ. ಜತೆಗೆ ಸಿರಿಗೆರೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಅಕ್ಕಿ, ಬೇಳೆ, ಬೆಲ್ಲ, ಗೌರಮ್ಮನ ಹಳ್ಳಿ ಮುಸ್ಲಿಂ ಬಾಂಧವರು ತರಕಾರಿ ನೀಡಲಿದ್ದಾರೆ ಎಂದರು.
ಮಠದ ಪದಾಧಿಕಾರಿಗಳು, ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.