ಮಕ್ಕಳ ಕೈಗೆ ಮೊಬೈಲ್ ಕೊಡದಿರಿ

SIRIGERE BLR 16 (1)
Published on

ಸಿರಿಗೆರೆ; ಸ್ವಾತಂತ್ರ್ಯ ಪೂರ್ವದಲ್ಲೇ ಪ್ರೌಢಶಾಲೆಯೊಂದನ್ನು ಸ್ಥಾಪಿಸಿ, ಬಡ ಮಕ್ಕಳ ಜ್ಞಾನದಾಹ ನೀಗಿಸುತ್ತಿರುವ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಕಾರ್ಯ ಶ್ಲಾಘನಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿದ್ದಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪಾಲಕರು ಮಕ್ಕಳ ಕೈಗೆ ಕೊಟ್ಟಿರುವ ಮೊಬೈಲ್ ಕಿತ್ತುಕೊಂಡು ಪುಸ್ತಕ ಕೊಟ್ಟು ಓದಿನ ಗೀಳು ಹಚ್ಚಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗಲಿದೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಬಿ.ರಂಗನಾಥ್ ಮಾತನಾಡಿ, ಸಿರಿಗೆರೆಯಲ್ಲಿ ಓದಲು ಉತ್ತಮ ವಾತಾವರಣವಿದೆ. ಇದರ ಸದುಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು.

ಉಪ ಪ್ರಾಚಾರ್ಯ ಜೆ.ಡಿ.ಬಸವರಾಜ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಎಚ್.ಬಿ.ನಾಗರಾಜಯ್ಯ, ಕೆ.ಎಂ.ರಮೇಶ್, ಓ.ಸುರೇಶ್ ಇತರರಿದ್ದರು.

ಶಿಕ್ಷಕರಾದ ಬಿ.ಎಸ್.ಮರುಳಸಿದ್ದಯ್ಯ ಚಿನ್ನ ಹಾಗೂ ಬೆಳ್ಳಿ ಪದಕ ಪ್ರಧಾನ ಕಾರ್ಯಕ್ರಮ, ತಿಮ್ಮನಕಟ್ಟಿ ಹಾಲೇಶ್ ಹಾಗೂ ಟಿ.ಓ.ಭಾಗ್ಯಾ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗಗಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.

ಆದರ್ಶ ವಿದ್ಯಾರ್ಥಿಗಳಾಗಿ ಆಯ್ಕೆಯಾದ ಕಾರ್ತಿಕ್, ಬಿ.ಟಿ.ಪ್ರೀತಿ ಅವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ತರಳಬಾಳು ಜಗದ್ಗುರುಗಳ ಸ್ಮರಣಾರ್ಥ ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 96.6ರಷ್ಟು ಅಂಕ ಪಡೆದ ಎಸ್.ಟಿ.ನಯನಾಗೆ ಚಿನ್ನ ಹಾಗೂ ಶೇ.90ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ 7 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

ಎಂ.ಗಾನವಿ ಮತ್ತು ತಂಡದವರು ಪ್ರಾರ್ಥಿಸಿದರು. ಶರತ್ ಪಾಟೀಲ್ ಸ್ವಾಗತಿಸಿದರು. ಬಿ.ಟಿ.ಪ್ರೀತಿ ಹಾಗೂ ಕೆ.ಎಂ.ಸುಮಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ.ನೂತನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net