

ಸಿರಿಗೆರೆ: ಆಂಧ್ರಪ್ರದೇಶದ ನಂದ್ಯಾಲದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದ ಒಂದು ಸಾವಿರ ವಿದ್ಯಾರ್ಥಿಗಳಿಗೆ 45 ದಿನಗಳ ಕಾಲ ಸ್ಥಳೀಯ ಶಿಷ್ಯರಿಂದ ದಾಸೋಹದ ವ್ಯವಸ್ಥೆ ಮಾಡಿಸಿ ರಾಜ್ಯಕ್ಕೆ ಮರಳುವಂತೆ ಮಾಡಿದ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ನಂದ್ಯಾಲದಲ್ಲಿ ಊಟವಿಲ್ಲದೆ ಪರಿತಪಿಸುತ್ತಿದ್ದ ರಾಜ್ಯದ ವಿದ್ಯಾರ್ಥಿಗಳ ವಿಷಯ ತಿಳಿದ ಶ್ರೀಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳನ್ನು ಮರಳಿ ರಾಜ್ಯಕ್ಕೆ ಕರೆತರುವ ಜತೆಗೆ ಅವರು ಅಲ್ಲಿರುವಷ್ಟು ದಿನ ಊಟ ಇತ್ಯಾದಿ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಿದ್ದರು.
ಭಾನುವಾರ ನಂದ್ಯಾಲದಿಂದ 300 ವಿದ್ಯಾರ್ಥಿಗಳಿಗೆ ರಾಜ್ಯಕ್ಕೆ ಮರಳುವ ವ್ಯವಸ್ಥೆ ರಾಜ್ಯ ಸರ್ಕಾರ ಮಾಡಿತ್ತು. ಇದೀಗ ಬಳ್ಳಾರಿಗೆ ಬಂದಿಳಿದಿರುವ ವಿದ್ಯಾರ್ಥಿಗಳು, ಅಲ್ಲಿಂದ ರಾಜ್ಯದ ವಿವಿಧ ಜಿಲ್ಲೆಯ ಊರುಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.
ಶ್ರೀಗಳು ಹಾಗೂ ಸಿಎಂ ಕಾರ್ಯದಿಂದ ಸಂತಸಗೊಂಡ ವಿದ್ಯಾರ್ಥಿಗಳು ಪೂಜ್ಯರ ಮೊಬೈಲ್‌ಗೆ ತಾವು ತಮ್ಮ ಊರುಗಳತ್ತ ಹೊರಟಿರುವ ಚಿತ್ರವನ್ನು ಕಳುಹಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.