

ಸಿರಿಗೆರೆ: ಬಾಲ್ಯದಲ್ಲೇ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಪಾಲಕರು ಮತ್ತು ಶಿಕ್ಷಕರಿಂದಾದರೆ ಸಾಧಕರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ರುದ್ರಪ್ಪ ತಿಳಿಸಿದರು.
ಪಳಕೇಹಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಅಂಕ ಗಳಿಕೆಗಿಂತ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಆಂಗ್ಲ ಮಾಧ್ಯಮ ವ್ಯಾಮೋಹ ಬಿಟ್ಟು ಕನ್ನಡ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಚ್.ಮಹಾಂತೇಶ್ ಮಾತನಾಡಿ, ಪ್ರತಿ ವ್ಯಕ್ತಿಯ ಭವಿಷ್ಯ ನಿರ್ಮಾಣಕ್ಕೆ ಪ್ರಾಥಮಿಕ ಶಾಲೆಗಳೇ ಅಡಿಗಲ್ಲುಗಳು. ಇಲ್ಲಿ ಹಾಕುವ ತಳಹದಿಯ ಮೇಲೆ ಮಕ್ಕಳ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಿ.ಸಿ.ಬಸವರಾಜಪ್ಪ, ಎಚ್.ಜಿ.ಮಲ್ಲಿಕಾರ್ಜುನ, ಎಸ್.ಓಬಳೇಶ, ಬಿ.ರುದ್ರಪ್ಪ, ಬಿ.ಆರ್.ಗಣೇಶ್ ಇತರರಿದ್ದರು.