ಕೆಲಸದ ಅಭದ್ರೆತೆಯಿಂದ ಸಂಕಷ್ಟ

Srigere Servay-1 (1)
Published on

ಸಿರಿಗೆರೆ: ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಿರುವುದರಿಂದ ಹಾಲಿ ಪರವಾನಗಿ ಭೂಮಾಪಕರಿಗೆ ಸಮಸ್ಯೆಯಾಗಲಿದೆ ಎಂದು ರಾಜ್ಯ ಪರವಾನಗಿ ಭೂಮಾಪಕರ ಸಂಘದ ಕಾರ್ಯದರ್ಶಿ ಸಿ.ರವಿಕುಮಾರ್ ಹೇಳಿದರು.

ಸಿರಿಗೆರೆ ಮಠದಲ್ಲಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನ್ಯಾಯಾಧೀಶತ್ವದ ಸದ್ಧರ್ಮ ನ್ಯಾಯಪೀಠದಲ್ಲಿ ಇತ್ತೀಚೆಗೆ ಅಹವಾಲು ಸಲ್ಲಿಸಿದರು.

ರಾಜ್ಯದಲ್ಲಿ 1800 ಪರವಾನಗಿ ಭೂಮಾಪಕರಿದ್ದು, ಅವರಿಗೆ ಸೇವಾ ಭದ್ರತೆ ಇರುವುದಿಲ್ಲ. ಸೇವಾ ಶುಲ್ಕವೂ ಸಮಪರ್ಕವಾಗಿ ವಿತರಣೆಯಾಗಿರುವುದಿಲ್ಲ. ಸ್ವಂತ ತಾಲೂಕಿನಿಂದ ದೂರದ ತಾಲೂಕುಗಳಿಗೆ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಪುನಃ 2972 ಪರವಾನಗಿ ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದರುವುದು ನಮ್ಮ ಜೀವನಕ್ಕೆ ಸಮಸ್ಯೆಯಾಗಲಿದೆ ಎಂದರು.

ಒಬ್ಬ ಪರವಾನಗಿ ಭೂಮಾಪಕರಿಗೆ ಒಂದು ತಿಂಗಳಿಗೆ ಕನಿಷ್ಠ 23 ಅಳತೆಗಳನ್ನು ನೀಡಬೇಕು ಎಂಬ ನಿಯಮವಿದೆ. ಇತ್ತೀಚೆಗೆ ತಿಂಗಳಿಗೆ 10-15 ಅಳತೆಗಳು ಸಿಗುತ್ತಿವೆ. ಒಂದು ಅಳತೆಗೆ ರೈತರು 1200 ಶುಲ್ಕ ಕಟ್ಟುತ್ತಾರೆ. ಅಳತೆ ಮುಗಿದ ಮೇಲೆ ಅದರಲ್ಲಿ 800 ರೂ. ನೀಡುತ್ತಿದ್ದಾರೆ. ಉಳಿದ 400 ರೂ. ಗಳು ಸರ್ಕಾರಕ್ಕೆ ಉಳಿತಾಯವಾಗುತ್ತದೆ. ಇತ್ತೀಚೆಗೆ ತುಮಕೂರಿನ ಪರವಾನಗಿ ಭೂಮಾಪಕರನ್ನು ಅಥಣಿ ತಾಲ್ಲೂಕಿಗೆ ನಿಯೋಜಿಸಿದ್ದಾರೆ. ಅಲ್ಲಿ ಹೋಗಿ ಅಲ್ಪ ಆದಾಯದಲ್ಲಿ ಜೀವನ ಮಾಡುವುದು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಸರ್ಕಾರವು ನಮ್ಮನ್ನು 11 (ಇ) ನಕ್ಷೆ ತತ್ಕಾಲ್ ಪೋಡಿ ಮತ್ತು ಅಲಿನೇಷನ್ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದೆ. ನಮ್ಮ ಸೇವೆಯು ಅಭದ್ರವಾಗಿದ್ದು, ನಾವು ಅತಂತ್ರರಾಗಿದ್ದೇವೆ. ಆದ್ದರಿಂದ ನಮ್ಮನ್ನು ಕಾಯಂಗೊಳಿಸುವಂತೆ ಸಂಬಂಧಿಸಿದವರಿಗೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಕುರಿತು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net