ನೀರಿಗಾಗಿ ಸದ್ಧರ್ಮ ಪೀಠಕ್ಕೆ ಮೊರೆ

sirigere Kotturu-3 (3)
Published on

ಸಿರಿಗೆರೆ: ಯೋಜನೆಗೆ ಮಂಜೂರಾತಿ ದೊರೆತಿದೆ. ಹಣವನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಆದರೆ, ತಾಂತ್ರಿಕ ನೆಪವೊಡ್ಡಿ ಅನುಷ್ಠಾನ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಈ ಸಮಸ್ಯೆಗೆ ತಾವೇ ಪರಿಹಾರ ಕಂಡುಹಿಡಿಯಬೇಕು…

ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ರೈತರ ನಿಯೋಗವು ಸಿರಿಗೆರೆಯ ಸದ್ಧರ್ಮ ನ್ಯಾಯಪೀಠಕ್ಕೆ ಇತ್ತೀಚೆಗೆ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಲ್ಲಿ ಅಲವತ್ತುಕೊಂಡರು.

ಕೊಟ್ಟೂರು ಮತ್ತು ಇತರ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರದ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 85 ಕೋಟಿ ರೂ. ಮೀಸಲಿರಿಸಿದ್ದರು. ತದ ನಂತರ ಸದರಿ ಯೋಜನೆಯನ್ನು 16 ಕೆರೆಗಳಿಗೆ ಪರಿಷ್ಕರಿಸಿ ಅಂದಾಜು 379 ಕೋಟಿ ರೂ. ಮೊತ್ತದ ಸಮಗ್ರ ಯೋಜನೆಗೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಿಂದ ಅನುಮೋದನೆಗೊಂಡಿದೆ.

ಆದರೆ, ಹತ್ತಾರು ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳು ತಲೆದೋರಿವೆ. ಈಗಾಗಲೇ ತಮ್ಮ ನೇತೃತ್ವದಲ್ಲಿ ಹಲವಾರು ಏತ ನೀರಾವರಿ ಯೋಜನೆಗಳು ಫಲಪ್ರದವಾಗಿದೆ. ಈ ಬಾರಿ ಕೊಟ್ಟೂರಿನಲ್ಲಿ 2021ರ ತರಳಬಾಳು ಹುಣ್ಣಿಮೆ ಆಯೋಜಿಸಿರುವುದು ನಮ್ಮ ಸುದೈವ. ಈ ಕಾರ್ಯಾವಧಿಯೊಳಗೆ ಕೆರೆಗಳಿಗೆ ನೀರು ಹರಿಸಿ ರೈತರ ಕಣ್ಣೀರೋರೆಸಬೇಕೆಂದು ಶ್ರೀಗಳಲ್ಲಿ ಮನವಿ ಮಾಡಿಕೊಂಡರು.

ವಕೀಲ ಪಂಡಿತಾರಾಧ್ಯ ಮಾತನಾಡಿ, ಶ್ರೀಗಳು ರಾಜ್ಯದ ಹಲವು ಬೃಹತ್ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಶ್ರೀಗಳಿಂದಲೇ ಕೊಟ್ಟೂರು ಭಾಗದ ಕೆರೆಗಳಿಗೆ ನೀರು ಹರಿಯುವ ವಿಶ್ವಾಸವಿದೆ ಎಂದರು.

ಎಲ್ಲರ ಅಭಿಪ್ರಾಯ ಬಳಿಕ ಮಾತನಾಡಿದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜನಪರವಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ತರಳಬಾಳು ಹುಣ್ಣಿಮೆ ಒಳಗೆ ಮಂಜೂರಾತಿ ಆದೇಶ ನೀಡಿ ಕಾಮಗಾರಿ ಆರಂಭಕ್ಕೆ ಟೆಂಡರ್ ಕರೆದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ನಾನೂ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸುತ್ತೇನೆ. ಇದಕ್ಕೆ ತಾಲೂಕಿನ ಜನ ಬೆಂಬಲವಾಗಿರಬೇಕು ಎಂದರು.

ತರಳಬಾಳು ಹುಣ್ಣಿಮೆಗೆ ಖಾನ್ ದೇಣಿಗೆ: ಕೊಟ್ಟೂರು ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಈಗಾಗಲೇ 60 ಲಕ್ಷ ರೂ. ವಾಗ್ದಾನವನ್ನು ಭಕ್ತರು ಮಾಡಿದ್ದು, ಕೊಟ್ಟೂರಿನ ಮುಸ್ಲಿ ಸಮಾಜದ ಮುಖಂಡ ನೂರುಲ್ಲಾ ಖಾನ್ ಹುಣ್ಣಿಮೆಗೆ ದೇಣಿಗೆಯಾಗಿ 25 ಸಾವಿರ ರೂ. ನಗದು ಶ್ರೀಗಳಿಗೆ ನೀಡಿದರು. ಇದನ್ನು ಸ್ವೀಕರಿಸಿದ ಸ್ವಾಮೀಜಿ, ಇದೇ ಹಣದಿಂದಲೇ ಮುಂದಿನ ಕೊಟ್ಟೂರು ತರಳಬಾಳು ಹುಣ್ಣಿಮೆ ಮಹೋತ್ಸವ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net