

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಪದ್ಭರಿತವಾದ ಕನ್ನಡ ಭಾಷೆಗೆ ಯಾವಾಗಲೂ ಗೆಲುವಾಗಲಿ ಎಂಬ ದೂರದೃಷ್ಟಿಯ ನೆಲೆಯಲ್ಲಿ ಕನ್ನಡ ಪರ ವಾತಾವರಣ ಹುಟ್ಟು ಹಾಕಲು ಸಿರಿಗನ್ನಡಂ ಗೆಲ್ಗೆ ಘೋಷವಾಕ್ಯ ಬರೆದು ಸಾರ್ವತ್ರಿಕಗೊಳಿಸಿದ ಕೀರ್ತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ರಾ.ಹ.ದೇಶಪಾಂಡೆ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.
ನಗರದ ಶ್ರೀಮತಿ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ಸಂಸತ್ಗೆ ಚುನಾಯಿತರಾದ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಣ ಇರಬಹುದಾದ ಚಾರಿತ್ರಿಕ ಘನತೆ ಅರಿಯಲು ಪ್ರಯತ್ನಿಸಬೇಕು. ಬದ್ಧತೆಯಿಂದ ಅಧ್ಯಯನಕ್ಕೆ ತೆರೆದುಕೊಂಡಾಗ ಶ್ರೇಷ್ಠ ಸಾಧನೆ ಸಾಧ್ಯ. ಕಾಮನಕಟ್ಟಿ, ಹೊಸಯಲ್ಲಾಪುರ, ಹೆಬ್ಬಳ್ಳಿ ಅಗಸಿ ಒಳಗೊಂಡಂತೆ ಮೂಲ ಧಾರವಾಡದ ನೆಲ ಶಕ್ತಿ ಸ್ಥಳವಿದ್ದಂತೆ ಎಂದರು.
ರವಿ ನಾಯಕ ಮಾತನಾಡಿ, ತಂತ್ರಜ್ಞಾನ ಇಂದಿನ ಅವಶ್ಯಕತೆ. ವಿದ್ಯಾರ್ಥಿಗಳು ಬದಲಾಗುತ್ತಿರುವ ಜಾಗತಿಕ ತಂತ್ರಜ್ಞಾನ ಅರಿತು ತಮ್ಮನ್ನು ತಾವು ಜಾಗತಿಕ ಮಟ್ಟದಲ್ಲಿ ಸಮರ್ಥರನ್ನಾಗಿ ರೂಪಿಸಿಕೊಳ್ಳಬೇಕು ಎಂದರು.
ಶಾಲೆ ಸಂಸ್ಥಾಪಕ ಅಧ್ಯಕ್ಷ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ವಿದ್ಯಾರ್ಥಿ ಸಂಸತ್ತಿನ ಸೃಷ್ಟಿ ಕನ್ನೆಗೌಡರ ಪ್ರಧಾನಮಂತ್ರಿಯಾಗಿ, ಸೃಷ್ಟಿ ಅಗಡಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.