ಸಿರಿಧಾನ್ಯ ಬೆಳೆ 10 ಸಾವಿರ ಹೆಕ್ಟೇರ್​ ಪ್ರದೇಶ ವಿಸ್ತರಣೆ ಗುರಿ

DC_Siridhanya
Published on

ತುಮಕೂರು: ಜಿಲ್ಲೆಯಲ್ಲಿ ಕೇವಲ 3 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯ ಬೆಳೆಯಲಾಗಿದ್ದು ಕನಿಷ್ಟ 10000 ಹೆಕ್ಟೇರ್​ ಪ್ರದೇಶಕ್ಕೆ ಬೆಳೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೇಳಿದರು.

ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ-2025ರ ಅಂಗವಾಗಿ ಕೃಷಿ ಇಲಾಖೆ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳ ಬಳಕೆ, ಖರೀದಿಸುವವರ ಸಂಖ್ಯೆ ಕಡಿಮೆ ಇರುವುದರಿಂದ ಸಿರಿಧಾನ್ಯಕ್ಕೆ ಹೆಚ್ಚಿನ ಬೇಡಿಕೆಯಿಲ್ಲದೆ ರೈತರು ಸಿರಿಧಾನ್ಯ ಬೆಳೆಯಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ 10000 ರೂ. ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದರಲ್ಲದೆ ಸಿರಿಧಾನ್ಯ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಈ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.

ಸ್ಪರ್ಧೆಯಲ್ಲಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಲಾದ ಸಾಮೆ ಪಾಲಾಕ್​ ಪನ್ನೀರ್​ ರೈಸ್​, ರಾಗಿ ಉಪ್ಪಿಟ್ಟು, ನವಣೆ ಹಲ್ವಾ, ಹುರುಳಿಕಾಳು ತೊಕ್ಕು, ರಾಗಿ ಉಪ್ಪಿಟ್ಟು, ಪೊಂಗಲ್​, ಪಾಯಸ, ಉಪ್ಪಿಟ್ಟು, ಕರ್ಜಿಕಾಯಿ, ಮತ್ತಿತರ ತಿನಿಸುಗಳ ರುಚಿ ಸವಿದ ಅವರು ಅಕ್ಕಿಯಿಂದ ತಯಾರಿಸುವ ತಿನಿಸುಗಳಿಗಿಂತ ಈ ಖಾದ್ಯಗಳು ರುಚಿಯಾಗಿವೆ. ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಸೇವಿಸಿದಲ್ಲಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆ ನಿಯಂತ್ರಣ ಮತ್ತು ಸಮತೋಲನವನ್ನು ಕಾಯ್ದುಕೊಳ್ಳಬಹುದು ತಿಳಿಸಿದರು.

ಮರೆತು ಹೋದ ಸಿರಿಧಾನ್ಯ ಖಾದ್ಯಗಳನ್ನು ತಯಾರಿಸಿರುವುದು ಅಭಿನಂದನಾರ್ಹ. ನೂಡಲ್ಸ್​, ಬರ್ಗರ್​, ಪಿಜಾಗಳಂತಹ ಫಾಸ್ಟ್​ ಫುಡ್​ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ. ದೇಶಿ ಉತ್ಪನ್ನಗಳಾದ ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಸೇವಿಸಿ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಅವರು ಪ್ರೋಟಿನ್​ ಸೇರಿದಂತೆ ಉತ್ತಮ ಪೋಷಕಾಂಶವುಳ್ಳ ಸಿರಿಧಾನ್ಯ ಸೇವೆನೆಯಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಇಲಾಖೆ ಅತ್ಯಂತ ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತಿದ್ದು, ವಿಭಿನ್ನ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ವಿಶ್ವಸಂಸ್ಥೆ ಕಳೆದ 2023ನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತ್ತು. ಅದರ ಭಾಗವಾಗಿ ಜಿಲ್ಲೆಯ ಸಿರಿಧಾನ್ಯ ಬೆಳೆಗಾರರನ್ನು ಮತ್ತು ಸಿರಿಧಾನ್ಯ ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳೆಯರು ಸಿರಿಧಾನ್ಯ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಬಂದಿರುವುದು ಸಂತಸ ತಂದಿದ್ದು, ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಬೇಕೆಂದು ಸಲಹೆ ನೀಡಿದರು.

ಹಲವಾರು ರೋಗಗಳಿಗೆ ಸಿರಿಧಾನ್ಯ ಬಳಕೆ ರಾಮಬಾಣವಾಗಿದೆ. ನಮ್ಮ ಭಾರತೀಯ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಸಿರಿಧಾನ್ಯಗಳು ಆರೋಗ್ಯವರ್ಧನೆಗೆ ಪೂರಕವಾಗಿವೆ. ಜನ ಸಾಮಾನ್ಯರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ರೋಗ ಮುಕ್ತರಾಗಿರಲು ಸಾಧ್ಯವೆಂದು ತಿಳಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆಹಾರ ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಪಿ.ಬಿ.ಸಿಂಧು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರಾಧ ಬಣಕಾರ್​ ಆಗಮಿಸಿದ್ದರು.

ಕೃಷಿ ಉಪನಿರ್ದೇಶಕ ಹುಲಿರಾಜು ಹಾಗೂ ಎಚ್​.ಸಿ.ಚಂದ್ರಕುಮಾರ್​, ಸಹಾಯಕ ಕೃಷಿ ನಿರ್ದೇಶಕ ಗಿರಿಜಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net