ಸಿರಿಧಾನ್ಯ ಸೇವನೆ ಆರೋಗ್ಯಕ್ಕೆ ಹಿತ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

23_12_Mdy_03(Rayth Dina)
Published on

ಮಂಡ್ಯ: ರಾಗಿ, ನವಣೆ, ಸಜ್ಜೆ ಸೇರಿದಂತೆ ಹಲವು ಸಿರಿಧಾನ್ಯಗಳಿವೆ. ಕೊಬ್ಬಿನಾಂಶ ಕಡಿಮೆ ಹೊಂದಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ವಿಶ್ವ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಆಯೋಜಿಸಿದ್ದ ‘ಸಿರಿಧಾನ್ಯ ರೋಡ್‌ಶೋ’ಗೆ ಚಾಲನೆ ನೀಡಿ ಮಾತನಾಡಿದರು. ಸಿರಿಧಾನ್ಯ 15ನೇ ಶತಮಾನದಲ್ಲೇ ಬಳಕೆಯಲ್ಲಿತ್ತು. ಸಿರಿಧಾನ್ಯ ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಕಡಿಮೆ ಕೀಟಬಾಧೆ, ಹೆಚ್ಚು ರೋಗಕ್ಕೆ ಒಳಗಾಗದೆ, ಕಡಿಮೆ ಮಳೆ ಇದ್ದರೂ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಕಡಿಮೆ ಖರ್ಚು ಮಾಡಿ ಸಿರಿಧಾನ್ಯ ಬೆಳೆಯನ್ನು ಬೆಳೆದು ರೈತರು ಹೆಚ್ಚಿನ ಆದಾಯಗಳಿಸಬಹುದು ಎಂದರು.

ಸಿರಿಧಾನ್ಯ ಮೊದಲು ಬಡವರ ಆಹಾರವಾಗಿತ್ತು. ಇಂದು ವೈದ್ಯರು ಇದರ ಮಹತ್ವವನ್ನು ತಿಳಿಸಿದ ಹಿನ್ನೆಲೆಯಲ್ಲಿ ಶ್ರೀಮಂತರೂ ಸೇರಿದಂತೆ ಎಲ್ಲರೂ ಸೇವಿಸುತ್ತಿದ್ದಾರೆ. ರೈತರನ್ನು ಸಿರಿಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸುವುದರ ಜತೆಗೆ ಸಿರಿಧಾನ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಅರಿವು ಮೂಡಿಸಲು ಇಂದು ಸಿರಿಧಾನ್ಯ ರೋಡ್ ಶೋ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ, ಸಹಾಯಕ ನಿರ್ದೇಶಕಿ ಸೌಮ್ಯಾ, ಮಾಲತಿ, ಮಮತಾ ಇತರರಿದ್ದರು.

ಸಿರಿಧಾನ್ಯ ರೋಡ್ ಶೋ ಡಿಸಿ ಕಚೇರಿಯಿಂದ ಪ್ರಾರಂಭವಾಗಿ ಬೆಂಗಳೂರು-ಮೈಸೂರು ಮುಖ್ಯ ರಸ್ತೆ ಮೂಲಕ ಸಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಯಿತು. ಬಳಿಕ ಆರ್.ಪಿ.ರಸ್ತೆ, ನೂರಡಿ ರಸ್ತೆ, ಕನ್ಯಕಾ ಪರಮೇಶ್ವರಿ ದೇವಸ್ಥಾನ, ಆರ್‌ಟಿಒ ಕಚೇರಿ ರಸ್ತೆ ಮಾರ್ಗವಾಗಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net