

ವಿಜಯವಾಣಿ ಸುದ್ದಿಜಾಲ ಉಡುಪಿ
ಪಾರಂಪರಿಕ ಆಹಾರ ಪದ್ಧತಿಗಳಲ್ಲಿದ್ದ ಸತ್ವಗಳಿಂದ ನಮ್ಮ ಹಿರಿಯರು ಹೆಚ್ಚಿನ ಆರೋಗ್ಯ ಹಾಗೂ ಆಯಸ್ಸು ಹೊಂದಿದ್ದರು. ಪ್ರಸ್ತುತ ಎಲ್ಲ ಆಹಾರಗಳೂ ಕಲಬೆರಕೆಯಿಂದ ಕೂಡಿದ್ದು ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶ ಲಭಿಸುತ್ತಿಲ್ಲ. ಸಿರಿಧಾನ್ಯಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ. ಹೀಗಾಗಿ ಅದನ್ನು ಬೆಳೆಯಲು ರೈತರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಸಿರಿಧ್ಯಾನ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2025ರ ನಿಮಿತ್ತ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕೃಷಿ ಇಲಾಖೆ ಉಡುಪಿ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ದೇಸೀಯ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಾಗಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಸೆಕೆಂಡರಿ ಕೃಷಿ ನಿರ್ದೇಶಕ ಹಾಗೂ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಎ.ಪದ್ಮಯ್ಯ ನಾಯ್ಕ್, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯಕ್ ವಂದಿಸಿದರು.
ಸಿರಿಧಾನ್ಯ ಹಬ್ಬ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ವಿವಿಧ ಆಹಾರೋತ್ಪನ್ನಗಳು ಗಮನ ಸೆಳೆದವು. ಭತ್ತದ ದೇಸೀಯ ವಿವಿಧ ತಳಿಗಳು, ಗೋ ಉಪ ಉತ್ಪನ್ನ, ಸಿರಿಧಾನ್ಯದಿಂದ ತಯಾರಿಸಿದ ಹಲ್ವಾ, ಚಿಕ್ಕಿ, ಸಿರಿಧಾನ್ಯಗಳ ಮಸಾಲೆ ಪದಾರ್ಥಗಳು ಸೇರಿದಂತೆ ವಿವಿಧ ಪ್ರಕಾರಗಳ ತಿಂಡಿ-ತಿನಿಸುಗಳು ಕಂಡುಬಂದವು.
ಸಿರಿಧಾನ್ಯಗಳು ಪೌಷ್ಟಿಕತೆಯಿಂದ ಕೂಡಿದ್ದು ನಿತ್ಯದ ಆಹಾರದಲ್ಲಿ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಹೀಗಾಗಿ ಎಲ್ಲ ವಯೋಮಾನದವರು ಸಿರಿಧಾನ್ಯಗಳನ್ನು ಸೇವಿಸಿ ಅದರ ಉಪಯೋಗ ಪಡೆಯಬೇಕು. ಇತ್ತೀಚೆಗೆ ನಮ್ಮ ಆಹಾರ ಪದ್ಧತಿಯಲ್ಲಿ ಮತ್ತೆ ಸಿರಿಧಾನ್ಯಗಳ ಬಳಕೆ ಆಗುತ್ತಿರುವುದು ಸಂತಸದ ವಿಚಾರ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ