

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೃಷಿ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಹಾಗೂ ಆತ್ಮ ಯೋಜನೆಯಡಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಇತ್ತೀಚಿಗೆ ಸಿರಿಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು.
ಜಿಲ್ಲೆಯ ವಿವಿಧ ಭಾಗಗಳಿಂದ ರೈತ ಮಹಿಳೆಯರು ಆಗಮಿಸಿ ಮನೆಯಿಂದಲೇ ಸಿರಿಧಾನ್ಯಗಳಿಂದ ತಯಾರಿಸಿದ್ದ ಸಿಹಿ, ಖಾರ ಮತ್ತು ವಿವಿಧ ಖಾದ್ಯಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹಾಗೂ ಜಿಪಂ ಸಿಇಒ ಡಾ.ಕೆ.ಎನ್. ಅನುರಾಧಾ ಅವರು ವಿವಿಧ ಖಾದ್ಯಗಳ ರುಚಿ ನೋಡುವ ಮೂಲಕ ಸಿರಿಧಾನ್ಯಗಳ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ 32 ರೈತ ಮಹಿಳೆಯರು ಭಾಗವಹಿಸಿದ್ದರು. ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಹಾಗೂ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳ ಪ್ರದರ್ಶನ ತೋರಿಕೆ, ರುಚಿ, ಸ್ವಾದಿಷ್ಟಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಂಡು ಮೂವರಿಗೆ ಬಹುಮಾನ ವಿತರಿಸಲಾಯಿತು. ಮೂವರು ರೈತ ಮಹಿಳೆಯರು ರಾಜ್ಯ ಮಟ್ಟದಲ್ಲಿ ನಡೆಯುವ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.