‘ಸಿರಿಧಾನ್ಯ’ ಜನರ ಆರೋಗ್ಯದ ಸಿರಿವಂತ ಧಾನ್ಯ

Siridhanya
Published on

ಹಿರೇಕೆರೂರ: ಸಿರಿಧಾನ್ಯವು ಶ್ರೀಮಂತರ ಆರೋಗ್ಯದ ಸಿರಿವಂತ ಧಾನ್ಯವಾಗಿದೆ ಎಂದು ಜಲಾನಯನ ವ್ಯವಸ್ಥಾಪಕ ಗುರುರಾಜ್ ಟಿ.ಆರ್. ಹೇಳಿದರು.

ತಾಲೂಕಿನ ಭೋಗಾವಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಸೋಮವಾರ ಏರ್ಪಡಿಸಿದ್ದ ಸಿರಿಧಾನ್ಯ ಬೇಸಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದು ಸಿರಿಧಾನ್ಯವು ಬಡವರ ಒಣ ಭೂಮಿಯ ಧಾನ್ಯವಾಗಿತ್ತು, ಇಂದು ಅದೇ ಸಿರಿಧಾನ್ಯವು ಶ್ರೀಮಂತರ ಆರೋಗ್ಯದ ಸಿರಿವಂತ ಧಾನ್ಯವಾಗಿದೆ. ಅಲ್ಪಾವಧಿ ಮತ್ತು ಮಳೆಯಾಶ್ರಿತ ಮುಂಗಾರು ಮತ್ತು ಹಿಂಗಾರು ಬೆಳೆಯಾಗಿದೆ. ತೃಣ ಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಸಾಮೆ, ಹಾರಕ, ಊದಲು, ಕೊರಲೆ ಮತ್ತು ಬರಗು ಜೋಳ ಇವುಗಳ ವಿಶೇಷತೆಗಳು. ಸಿರಿಧಾನ್ಯ ಬೆಳೆಯು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ, ಬರಗಾಲ, ಉಷ್ಣಾಂಶ ತಡೆಯುತ್ತದೆ ಮತ್ತು ಮಿತ ಗೊಬ್ಬರ ಬಳಕೆಯಿಂದ ರೈತನಿಗೆ ಲಾಭದಾಯಕವೇ ಹೊರತು ನಷ್ಟವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಿರಿಧಾನ್ಯ ಬೇಸಾಯಗಾರ ವಿವೇಕಾನಂದ ಗಂಗನಗೌಡ್ರ ಮಾತನಾಡಿ, ಸಿರಿಧಾನ್ಯಗಳನ್ನು ಬೆಳೆಯುವ ಮೊದಲು ಮಣ್ಣನ್ನು ಹದಗೊಳಿಸುವಿಕೆ, ಉತ್ತಮ ಗುಣಮಟ್ಟದ ಬೀಜಗಳ ಆಯ್ಕೆ, ಕಳೆಗಳ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೆಂದ್ರೀಕರಿಸಬೇಕು. ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿರಿಧಾನ್ಯ ಬೆಳೆಗೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ರೈತರು ಸರಿಯಾದ ಸಮಯದಲ್ಲಿ ಬೆಳೆದು ಉತ್ತಮ ಇಳುವರಿ ಜತೆಗೆ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ಕೃಷಿ ಮೇಲ್ವಿಚಾರಕ ಧರ್ಮಪ್ಪ ಜೊಗೇರ ಮಾತನಾಡಿ, ಅಂತರ್ ಬೆಳೆಗಳಾಗಿ ಸಿರಿಧಾನ್ಯ ಬಳಕೆ ಮಾಡಬಹುದು. ಸಿರಿಧಾನ್ಯ ಬೇಸಾಯವನ್ನು ಪ್ರೋತ್ಸಾಹಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಎಕರೆಗೆ 10,000 ಪ್ರಗತಿ ನಿಧಿ ಮತ್ತು ಒಂದು ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಾಂಕೇತಿಕವಾಗಿ ಎರಡು ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.

ವಲಯದ ಸಾಧನೆ ಬಗ್ಗೆ ವಲಯದ ಮೇಲ್ವಿಚಾರಕ ಮಂಜುನಾಥ ಎನ್. ಮಾಹಿತಿ ತಿಳಿಸಿದರು.

ಒಕ್ಕೂಟದ ಅಧ್ಯಕ್ಷೆ ಮಂಜಮ್ಮ ಬತ್ತೂರಿ, ಉಪಾಧ್ಯಕ್ಷ ಗಂಗನಗೌಡ್ರ ಗೌಡ್ರ, ಶಿವಯೋಗಪ್ಪ ದಾನಿಗೊಂಡ್ರ, ಸುರೇಶ ಆರಿಕಟ್ಟಿ, ಪಂಚನಗೌಡ ಗಂಗನಗೌಡ್ರ, ಹನುಮಗೌಡ ಗಂಗನಗೌಡ್ರ, ಪಾರ್ವತಮ್ಮ ಕಾಚರ್, ಸೇವಾ ಪ್ರತಿನಿಧಿ ಪ್ರಿಯಾ ಕೆ. ಹಾಗೂ ಪ್ರಗತಿ ಬಂಧು, ಸ್ವ ಸಹಾಯ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net