

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯೂ ಮುಂಚೂಣಿಗೆ ಬರುತ್ತಿದ್ದು, ಪ್ರಸ್ತುತ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಜತೆಗೆ ಸಿರಿಧಾನ್ಯ ಖರೀದಿಗೂ ಇದೇ ಮೊದಲ ಬಾರಿಗೆ ಅವಕಾಶ ಮಾಡಿಕೊಡಲಾಗಿದೆ.
ಕಣ್ಮರೆ ಆಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಉತ್ತೇಜನ ಕಾರ್ಯಕ್ರಮದಡಿ ಈಗಾಗಲೇ ಜಿಲ್ಲೆಯಲ್ಲಿ 10 ಬಗೆಯ ದೇಶಿ ತಳಿಗಳು ನೋಂದಣಿಯಾಗಿರುವ ಜತೆಗೆ ಸಿರಿಧಾನ್ಯ ಬೆಳೆಗೂ ಉತ್ತೇಜನ ನೀಡುತ್ತಿರುವ ಕೃಷಿ ಇಲಾಖೆ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡುವ ಕಾರ್ಯಕ್ರಮ ರೂಪಿಸುತ್ತಿದೆ. ಸಿರಿಧಾನ್ಯ ಬೆಳೆಯ ಮಹತ್ವ ಅದಕ್ಕಿರುವ ಬೇಡಿಕೆ ಜತೆಗೆ ಬೆಳೆಯಲು ಮಾರ್ಗದರ್ಶನ ಸೇರಿ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಮನೆ ಬಳಕೆಗೆ ಬೆಳೆ: ಕಳೆದ ನಾಲ್ಕೈದು ವರ್ಷದಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಸಿರಿಧಾನ್ಯ ಬೆಳೆಯಲು ರೈತರು ಮುಂದಾಗಿದ್ದಾರೆ, ಆದರೆ ದೊಡ್ಡಮಟ್ಟದಲ್ಲಿ ಬೆಳೆಯುತ್ತಿಲ್ಲ. ಅವರ ಮನೆಗಳಿಗೆ ಸಾಕಾಗುವಷ್ಟು ಬೆಳೆಯಲಾಗುತ್ತಿದ್ದು ಮಾರಾಟ ಮಾಡುವಷ್ಟು ದೊಡ್ಡಮಟ್ಟದ ಕೃಷಿ ಕಂಡುಬರುತ್ತಿಲ್ಲ. ಆದರೆ ಕಳೆದ ಸಾಲಿನಲ್ಲಿ ಕೆಲವು ರೈತರು ಅರ್ಧ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಸಿರಿಧಾನ್ಯ ಬೆಳೆಯ ಪ್ರಯೋಗಕ್ಕೆ ಮುಂದಾಗಿದ್ದು ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸಿರಿಧಾನ್ಯ ಖರೀದಿಗೂ ಅವಕಾಶ ಮಾಡಿಕೊಡಲಾಗಿದ್ದು ಸಿರಿಧಾನ್ಯ ಬೆಳೆಗಾರರು ಹೆಸರು ನೋಂದಾಯಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬರಗಾಲದಲ್ಲೂ ಬೆಳೆ: ’ಕಿರುಧಾನ್ಯ’ ಅಥವಾ ’ಸಿರಿಧಾನ್ಯ’ ಎಂದು ಕರೆಯಲ್ಪಡುವ ಸಣ್ಣ ಕಾಳುಗಳ ಒಂದು ವಿಧವಾಗಿರುವ ಈ ತಳಿಗಳು ಬಯಲು ಸೀಮೆಯಾದ ಗ್ರಾಮಾಂತರ ಜಿಲ್ಲೆಯ ಹವಾಗುಣಕ್ಕೆ ಹೇಳಿ ಮಾಡಿಸಿದಂತಿವೆ, ಬರಗಾಲದಂತಹ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಈ ಬಗ್ಗೆ ಅಸಕ್ತಿ ತೋರಿಸಬೇಕು ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮನವಿಯಾಗಿದೆ. ಸಿರಿಧಾನ್ಯಗಳು ಪೌಷ್ಟಿಕಾಂಶಗಳಿಂದ ಕೂಡಿದ್ದು, ನಾರಿನಂಶ, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿಂದ ಸಮೃದ್ಧವಾಗಿವೆ. ಇವುಗಳಲ್ಲಿ ಹಲವು ಬಗೆಗಳಿದ್ದು ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ. ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಸರ್ಕಾರವೂ ಸಿರಿಧಾನ್ಯ ಬೆಳೆಗಾರರು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತಿದೆ.
ಜ.1ರಿಂದ ಖರೀದಿ ಆರಂಭ: ರಾಜ್ಯ ಸರ್ಕಾರ 2025-26 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ.ಗಳ ಬೆಲೆ ನಿಗದಿ ಪಡಿಸಿದೆ.ಸಾಮೆ ಹಾಗೂ ನವಣೆಗೆ ಪ್ರತ್ಯೇಕ ದರವಿದ್ದು ಉಳಿದ ಕಿರು ಸಿರಿಧಾನ್ಯಗಳಿಗೆ ರಾಗಿಯಷ್ಟೇ ದರ ನಿಗಧಿಯಾಗಿದೆ. ಅ.1 ರಿಂದ ಡಿ.15 ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. 2026 ಜ.1 ರಿಂದ ಮಾ. 31 ರ ಅವಧಿಯವರೆಗೆ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆ ಸಲ್ಲಿಸಿ: ತಾಲೂಕುಗಳ ವ್ಯಾಪ್ತಿಯ ಕೇಂದ್ರಗಳಲ್ಲಿ ಈಗಾಗಲೇ ಸಿರಿಧಾನ್ಯ ಬೆಳೆಯ ರೈತರ ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ಡಿ.12 ರವರೆಗೆ ನೋಂದಣಿ ಮಾಡಿಸಲು ಅವಕಾಶ ಇರುತ್ತದೆ. ಇದಕ್ಕೆ ಜಿಲ್ಲೆಯ ಅರ್ಹ ರೈತರು ಆಧಾರ್ ಕಾರ್ಡ್, ಫ್ರೂಟ್ ಐಡಿ ಮತ್ತು ಇತರ ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕು. 2026 ಜ.1 ರಿಂದ ಮಾ.31 ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಯೋಜನೆಯಡಿ ಮಾರಾಟಕ್ಕೆ ನಿಗದಿಪಡಿಸಿರುವ ದರ
ಧಾನ್ಯ ದರ (ಪ್ರತಿ ಕ್ವಿಂಟಾಲ್ಗೆ)
ರಾಗಿ 4,886
ಕಿರು ಸಿರಿಧಾನ್ಯಗಳು 4,886
ಸಾಮೆ ಮತ್ತು ನವಣೆ 2,369
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಈ ಬಾರಿ ರಾಗಿ ಜತೆಗೆ ಸಿರಿಧಾನ್ಯ ಖರೀದಿಗೂ ಅವಕಾಶ ಮಾಡಿಕೊಡಲಾಗಿದ್ದು, ಸಿರಿಧಾನ್ಯ ಬೆಳೆಗಾರರು ಹೆಸರು ನೋಂದಾಯಿಸಿಕೊಳ್ಳಬಹುದು. ಈಗಾಗಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ಅಗತ್ಯ ದಾಖಲೆಗಳೊಂದಿಗೆ ಕೇಂದ್ರಗಳನ್ನು ಸಂಪರ್ಕಿಸಬಹುದು. ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗೂ ಇಲಾಖೆ ವತಿಯಿಂದ ಪ್ರೋತ್ಸಾಹ ನೀಡುತ್ತಿದ್ದು ಸಾಕಷ್ಟು ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ಜತೆಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ, ಬೆಂ.ಗ್ರಾಮಾಂತರ