

ಮಡಿಕೇರಿ:
ಕಲೆ, ಸಂಸ್ಕೃತಿ, ಭಾಷೆ, ಗ್ರಾಮೀಣ ಶಿಕ್ಷಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವುದು, ಉತ್ತಮ ಆರೋಗ್ಯ ಹೊಂದಲು ಮಾರ್ಗದರ್ಶನ, ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ರೂಪಿಸುವ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ನೂತನವಾಗಿ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. "ಸಂಸ್ಕೃತಿ ಸಿರಿ" ಬಳಗದ ಲಾಂಛನವನ್ನು ಸೋಮವಾರ ಇಲ್ಲಿ ಬಿಡುಗಡೆಗೊಳಿಸುವ ಮೂಲಕ ನೂತನ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.
ಈ ಸಂದರ್ಭ ಮಾತನಾಡಿದ ಬಳಗದ ಟ್ರಸ್ಟಿ ಡಾ. ಮೋಹನ್ ಅಪ್ಪಾಜಿ, ಎಲ್ಲರೂ ಒಗ್ಗಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ತೊಂದರೆಗೊಳಗಾಗಿರುವವರನ್ನು ಗುರುತಿಸಿ ಸಹಾಯ ನೀಡುವುದು, ಕೊಡಗಿನ ಕಲೆ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದರು.
ಮತ್ತೋರ್ವ ಟ್ರಸ್ಟಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ನಾವು ದುಡಿಯುವ ಒಂದು ಭಾಗವನ್ನು ಸಮಾಜದ ಏಳಿಗೆಗೆ ಮೀಸಲಿಟ್ಟು ಸಮಾಜವನ್ನು ಬೆಳೆಸಲು ಮುಂದಾಗಬೇಕು. ನೂತನವಾಗಿ ಅಸ್ತಿತ್ವಕ್ಕೆ ಬಂದ ಬಳಗದ ಮುಖಾಂತರ ನಿರಂತರವಾಗಿ ಸಮಾಜ ಸೇವೆ ಮುಂದುವರಿಯಲಿದೆ ಎಂದರು.
ಇನ್ನೊಬ್ಬರು ಟ್ರಸ್ಟಿ ಕೆ.ಎಂ. ಗಣೇಶ್ ಮಾತನಾಡಿ, ಹಲವು ಸಮಾನ ಮನಸ್ಕ ಟ್ರಸ್ಟಿಗಳು ಸೇರಿ ಅಸ್ತಿತ್ವಕ್ಕೆ ತಂದ ಈ ಬಳಗವು ಹಲವು ಸಾಮಾಜಿಕ ಯೋಜನೆಗಳನ್ನು ತರುವಂತಾಗಲಿ. ಅಲ್ಲದೇ ಕನ್ನಡ ಮತ್ತು ಕೊಡವ ಭಾಷೆಗಳ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದು ಕರ್ನಾಟಕದಾದ್ಯಂತ ಬಳಗದ ಹೆಸರು ಪಸರಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿ ಈರಮಂಡ ಹರಿಣಿ ವಿಜಯ್, ಬಳಗದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ನಿಶಾ ಮೋಹನ್, ಸುನೀತಾ ಗಣೇಶ್, ಸಿನಿಮಾ ನಿರ್ಮಾಪಕ, ನಿರ್ದೇಶಕ, ಸಾಹಿತಿ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ, ವಿಜಯ್ ಉತ್ತಯ್ಯ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಂಯೋಜಕರು ಹಾಗೂ ಎಂ.ಎ.ಕೊಡವ ವಿಭಾಗ ಸಹ ಪ್ರಾಧ್ಯಾಪಕ ಮೇಚಿರ ರವಿಶಂಕರ್ ನಾಣಯ್ಯ, ಹೈ ಕೋರ್ಟ್ ವಕೀಲ ಆನೆಡ ಹರೀಶ್ ಗಣಪತಿ, ಸಮಾಜ ಸೇವಕ ಅಮ್ಮಾಟಂಡ ದೇವಯ್ಯ, ವಿಂದ್ಯಾ ದೇವಯ್ಯ, ಮಡಿಕೇರಿಯ ಉದ್ಯಮಿ ಕೋಲೆಯಂಡ ದೀಪಾ ಪೃಥ್ವಿ, ಚಿತ್ರ ನಟ ತೋತಿಯಂಡ ಕಿರಣ್ ಸೋಮಣ್ಣ ಇದ್ದರು.